ಚಿತ್ರ: ಸಿಂಹ ರೂಪಿಣಿ
ನಿರ್ದೇಶನ: ಕಿನ್ನಾಳ ರಾಜ್
ನಿರ್ಮಾಣ: ಕೆಎಂ ನಂಜುಂಡೇಶ್ವರ
ತಾರಾ ಬಳಗ: ಯಶ್ ಶೆಟ್ಟಿ, ಅಂಕಿತಾ ಗೌಡ, ದಿವ್ಯ ಆಲೂರು, ಸುಮನ್, ವಿಜಯ್ ಚೆಂಡೂರು, ದಿನೇಶ್ ಮಂಗಳೂರು, ಹರೀಶ್ ರಾಯ್, ಇತರರು
ರೇಟಿಂಗ್: 3.5
ಬೆಳ್ಳಿ ತೆರೆಯ ಮೇಲೆ ನೋಡುಗರನ್ನು ಭಾವ ಪರವಶ ಮಾಡುವ ಭಕ್ತಿ ಪ್ರಧಾನ ಚಿತ್ರ ಈ ವಾರ ತೆರೆಗೆ ಬಂದಿರುವ ‘ಸಿಂಹ ರೂಪಿಣಿ’.
ಕನ್ನಡದಲ್ಲಿ ಸಾಕಷ್ಟು ಭಕ್ತಿ ಪ್ರಧಾನ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಮನಸ್ಸಿನಲ್ಲಿ ನೆಲೆಯೂರಿದ ಚಿತ್ರಗಳು ಬಹಳ ಕಡಿಮೆ. ನೋಡುಗರ ಮನಸ್ಸಿನಲ್ಲಿ ಭಕ್ತಿಯ ಜೊತೆಗೆ ನೆನಪಿನಲ್ಲಿ ಉಳಿಯುವ ಚಿತ್ರವಾಗಿ ಸಿಂಹ ರೂಪಿಣಿ ತೆರೆಗೆ ಬಂದಿದೆ.
ಚಿತ್ರದಲ್ಲಿ ಭಕ್ತಿ ಪ್ರಧಾನ ಕಥೆಯ ಜೊತೆಗೆ ಕಮರ್ಷಿಯಲ್ ಅಂಶಗಳು ಇವೆ. ಭೂಮಿಗೆ ದೇವತೆಗಳು ಬಂದು ನೆನೆಸಲು ಯಾವ ರೀತಿಯ ಕಾರಣ ಇದೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ. ಮಾರಮ್ಮನ ಕಥೆ ನೋಡುಗರ ಗಮನ ಸೆಳೆಯುತ್ತದೆ.
ಚಿತ್ರದ ಮೊದಲ ಭಾಗದಲ್ಲಿ ಮಾರಮ್ಮ ದೇವಿ ನೆಲೆಗೊಂಡ ಗ್ರಾಮದಲ್ಲಿ ನಡೆಯುವ ಪ್ರೀತಿ, ಗೆಳೆತನ, ದ್ವೇಷ ಇತ್ಯಾದಿ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಎರಡನೇ ಭಾಗದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಮಾರಮ್ಮ ಯಾವ ರೀತಿ ಅವತಾರ ತಾಳುತ್ತಾಳೆ ಎನ್ನುವ ಕಥೆ ಇದೆ.
ನಿರ್ದೇಶಕರು ನೋಡುಗರಲ್ಲಿ ಮಾರಮ್ಮನ ಮೇಲೆ ಭಕ್ತಿ ಉಕ್ಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ಒಂದಷ್ಟು ಪವಾಡಗಳು ಕಾಣಲು ಸಿಗುತ್ತವೆ. ಇವೆಲ್ಲವೂ ಕಥೆಗೆ ಪೂರಕವಾಗಿವೆ.
ಭಕ್ತಿ ಪ್ರಧಾನ ಚಿತ್ರದಲ್ಲಿ ಎಲ್ಲಾ ನಟರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಯಶ್ ಶೆಟ್ಟಿ ಅವರ ಪಾತ್ರ ಭಿನ್ನವಾಗಿದೆ. ಅಂಕಿತಾ ಗೌಡ ಮುದ್ದಾಗಿ ಕಾಣಿಸುತ್ತಾರೆ. ದಿನೇಶ್ ಮಂಗಳೂರು, ದಿವ್ಯ ಆಲೂರು, ಹರೀಶ್ ರಾಯ್, ನೀನಾಸಂ ಅಶ್ವಥ್, ಸುಮನ್, ವಿಜಯ್ ಚೆಂಡೂರು ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಆಕಾಶ್ ಪರ್ವ ಸಂಗೀತದ ಎರಡು ಹಾಡುಗಳು ಗಮನ ಸೆಳೆಯುತ್ತವೆ. ಕಿರಣ್ ಕ್ಯಾಮರಾದಲ್ಲಿ ಮಾರಮ್ಮನ ಅವತಾರ ಚೆನ್ನಾಗಿ ಮೂಡಿ ಬಂದಿದೆ.

Be the first to comment