ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿರುವ ಅಭಿಮಾನ್ ಸ್ಟುಡಿಯೋ ಜಾಗವನ್ನು ಅರಣ್ಯಭೂಮಿ ಎಂದು ಘೋಷಿಸಿ ಮಾಲೀಕರಿಂದ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ.
1969ರಲ್ಲಿ ನಟ ಟಿ.ಎನ್. ಬಾಲಕೃಷ್ಣ ಅವರಿಗೆ 20 ಎಕರೆ ಭೂಮಿ ನೀಡಲಾಗಿತ್ತು. ನಿಯಮಗಳ ಪ್ರಕಾರ ಈ ಭೂಮಿಯನ್ನು 20 ವರ್ಷಗಳವರೆಗೆ ಪರಭಾರೆ ಮಾಡಲು ಅವಕಾಶವಿರಲಿಲ್ಲ. ಆದರೆ ನಿಯಮ ಉಲ್ಲಂಘನೆ ಸಂಭವಿಸಿರುವುದಾಗಿ ಆರೋಪಿಸಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿ ಖಾತೆ ಬದಲಾವಣೆ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿನ 20 ಎಕರೆ ಭೂಮಿ 1969 ರ ಏಪ್ರಿಲ್ 9 ರಂದು ಬಾಲಕೃಷ್ಣಗೆ 20 ವರ್ಷ ಗೇಣಿ ಆಧಾರದ ಮೇಲೆ ನೀಡಲಾಗಿತ್ತು.1970ರ ಮಾರ್ಚ್ 21ರ ಆದೇಶದಲ್ಲಿ ಈ ಭೂಮಿಯನ್ನು ಸ್ಟುಡಿಯೋ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು. ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ ಅಥವಾ ಪರಭಾರೆ ಮಾಡಬಾರದು ಎಂಬ ಕಠಿಣ ಷರತ್ತು ವಿಧಿಸಲಾಗಿತ್ತು. ಷರತ್ತು ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ದು ಮಾಡಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಆದರೆ ಬಾಲಕೃಷ್ಣ ಕುಟುಂಬದ ಮಕ್ಕಳು 20 ಎಕರೆ ಭೂಮಿಯಲ್ಲಿ 10 ಎಕರೆ ಮಾರಾಟ ಮಾಡಿದ್ದು 1970ರ ಆದೇಶದ ಉಲ್ಲಂಘನೆಯಾಗಿದೆ. ಸ್ಟುಡಿಯೋ ಅಭಿವೃದ್ಧಿಗಾಗಿ ಯಾವುದೇ ಕಾಮಗಾರಿಗಳು ಕೈಗೊಳ್ಳಲಾಗಿಲ್ಲ. 10 ಎಕರೆ ಬದಲಿಗೆ 12 ಎಕರೆ ಭೂಮಿಯನ್ನು ಮಾರಾಟ ಮಾಡಲಾಗಿದೆ. 2021ರ ಆಗಸ್ಟ್ 16ರಂದು ರಾಘವೇಂದ್ರ ಬಿ.ಕೆ. ಅವರೊಂದಿಗೆ ಪ್ರತಿ ಚದರ ಅಡಿಗೆ ರೂ. 3,500 ಕ್ಕೆ 10 ಎಕರೆ ಭೂಮಿಯನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದು, ಇದು ಮೂರನೇ ವ್ಯಕ್ತಿಯ ಹಕ್ಕು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ.
—–





Be the first to comment