Firefly Review : ಡಿಪ್ರೆಷನ್ ಗೆ ಮೆಡಿಸಿನ್ ಫೈರ್ ಫ್ಲೈ

ಚಿತ್ರ : ಫೈರ್ ಫ್ಲೈ
ಪ್ರಧಾನ ಪಾತ್ರಗಳು : ವಂಶಿ ಕೃಷ್ಣ, ರಚನಾ ಇಂದರ್ ,ಅಚ್ಚುತ್ ಕುಮಾರ್ , ಸುಧಾರಾಣಿ….
ನಿರ್ದೇಶಕ : ವಂಶಿ ಕೃಷ್ಣ
ನಿರ್ಮಾಣ : ನಿವೇದಿತಾ ಶಿವರಾಜ್ ಕುಮಾರ್
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಅಭಿಷೇಕ ಕಲ್ಲತ್ತಿ
ಸಿನಿಮಾ‌ ಅವಧಿ : 2Hour 13m
ರೇಟಿಂಗ್ : 3.5/5

ಅಪಘಾತದಿಂದ ಕೋಮ ಸೇರಿದ ವ್ಯಕ್ತಿ, ಮೂರು ತಿಂಗಳ ಬಳಿಕ ಎಚ್ಚರಗೊಂಡಾಗ ಅಘಾತ ಎದುರಿಸಬೇಕಾಗುತ್ತದೆ. ಈ ಆಘಾತ ಆತನನ್ನು ಡಿಪ್ರೆಷನ್ ಗೆ ಒಳಗಾಗುವಂತೆ ಮಾಡುತ್ತದೆ. ಈ ಡಿಪ್ರೆಷನ್ ನಿಂದ ಆತ ದೂರಾಗಲು ಮಾಡುವ ಪ್ರಯತ್ನವನ್ನು ತುಂಬ ರಂಜನೀಯವಾಗಿ ಪ್ರೇಕ್ಷಕರ ಮುಂದಿಡಲಾಗಿದೆ.

ವಿವೇಕಾನಂದ ಎನ್ನುವುದು ಕಥಾ ನಾಯಕನ ಹೆಸರು. ಆದರೆ ಈತನದು ಅನಂದವೇ ಇಲ್ಲದ ಬದುಕು. ಹೆಜ್ಜೆ ಹೆಜ್ಜೆಗೂ ತನ್ನವರು ಎನ್ನುವವರೇ ಇಲ್ಲ ಎನ್ನುವ ಗೋಳು. ಇದೇ ಚಿಂತೆಯಿಂದಲೇ ನಿದ್ರಾ ಹೀನತೆ. ಒಂದು ಹಂತದಲ್ಲಿ ಡ್ರಗ್ಸ್ ಗೂ ಶರಣು. ಆದರೆ ಯಾವುದು ಕೂಡ ಶಾಶ್ವತ ಪರಿಹಾರ ಕೊಡುವುದೇ ಇಲ್ಲ. ಪರಿಹಾರಗಳ ಪ್ರಯತ್ನದಲ್ಲೇ ವಿವೇಕಾನಂದನಿಗೆ ಬದುಕಿನ ಸತ್ಯಗಳ ಅನಾವರಣವಾಗುತ್ತಾ ಹೋಗುತ್ತದೆ. ಅಂತಿಮವಾಗಿ ವಿವೇಕಾನಂದನ ಡಿಪ್ರೆಷನ್ ಗೆ ಸಿಗುವ ಔಷಧಿ ಏನು ಎನ್ನುವುದೇ ಚಿತ್ರದ ತಿರುಳು.

ಕಾರಣಗಳೇನೇ ಇರಬಹುದು. ಡಿಪ್ರೆಷನ್ ಗೆ ಒಳಗಾಗುವುದು ಇವತ್ತಿನ ಯುವ ಜನಾಂಗದ ಪ್ರಮುಖ ಸಮಸ್ಯೆ. ಇಂಥದೊಂದು ವಿಚಾರವನ್ನು ಕತೆಯಯಾಗಿಸಿರುವ ನಿರ್ದೇಶಕ ವಂಶಿಯ ಧೈರ್ಯವನ್ನು ಮೆಚ್ಚಲೇಬೇಕು. ಸ್ವತಃ ಪಾತ್ರವಾಗಿ ಕೂಡ ವಂಶಿ ವಿವೇಕಾನಂದನಿಗೆ ಜೀವ ತುಂಬಿದ್ದಾರೆ. ಮಧ್ಯಂತರದ ಬಳಿಕ ಬರುವ ನಟಿ ರಚನಾ ಇಂದರ್ ಜೀವಾಳವಾಗಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಮೂಗು ಸುರೇಶ್ ಪಾತ್ರಗಳು ಪ್ರಾಧಾನ್ಯತೆ ಪಡೆದಿವೆ. ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಎರಡೇ ದೃಶ್ಯದಲ್ಲಿ ಕಾಣಿಸಿಕೊಂಡರೂ ಕೊನೆಯ ತನಕ ತಮ್ಮ ಪ್ರಭಾವ ಕಾಯ್ದುಕೊಳ್ಳುತ್ತಾರೆ.

ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರದ ಪ್ರಮುಖ ಆಕರ್ಷಣೆ. ಒಟ್ಟಿನಲ್ಲಿ ಡಾ.ರಾಜ್ ಕುಮಾರ್ ಕುಟುಂಬ ನಿರ್ಮಿಸುತ್ತಿದ್ದಂಥ ಸಾಮಾಜಿಕ ಕಳಕಳಿಯ ಕೌಟುಂಬಿಕ ಚಿತ್ರ ನೀಡುವಲ್ಲಿ ಮೂರನೇ ತಲೆಮಾರಿನ ಕುಡಿ ನಿವೇದಿತಾ ಶಿವರಾಜ್ ಕುಮಾರ್ ಯಶಸ್ವಿಯಾಗಿರುವುದು ಮಾತ್ರ ಸತ್ಯ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!