Ghost Movie Review : 48 ಗಂಟೆಗಳ ತಂತ್ರ, ಪ್ರತಿತಂತ್ರದ ಕಥೆ ಘೋಸ್ಟ್ !

ಚಿತ್ರ: ಘೋಸ್ಟ್

ನಿರ್ಮಾಣ : ಸಂದೇಶ್ ಪ್ರೊಡಕ್ಷನ್ಸ್ ಸಂದೇಶ್ ಎನ್
ನಿರ್ದೇಶನ : ಶ್ರೀನಿ
ತಾರಾಗಣ: ಶಿವರಾಜ್ ಕುಮಾರ್, ಜಯರಾಮ್, ಅನುಪಮ್ ಖೇರ್, ಅರ್ಚನಾ ಜೋಯಿಸ್ ಇತರರು.

ರೇಟಿಂಗ್: 4/5

48 ಗಂಟೆಗಳಲ್ಲಿ ರಕ್ತಪಾತ ಇಲ್ಲದೇ ಬುದ್ಧಿವಂತಿಕೆಯ ಗ್ಯಾಂಗ್ ಸ್ಟರ್ ಕಥೆಯಾಗಿ ತೆರೆಯ ಮೇಲೆ ಮೂಡಿ ಬಂದಿರುವುದು ಘೋಸ್ಟ್ ಚಿತ್ರದ ಒನ್ ಲೈನ್ ಸ್ಟೋರಿ!

ಸೆಂಟ್ರಲ್ ಜೈಲಿನಲ್ಲಿ ನಡೆಯುವ ಸಮಾರಂಭದಲ್ಲಿ ಹೊರಗಡೆಯಿಂದ ಬಂದವರು ಜೈಲನ್ನು ಹೈಜಾಕ್ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸವಾಲು ಒಡ್ಡುತ್ತಾರೆ. ಹೈಜಾಕ್ ಕಥೆಯಿಂದ ಆರಂಭವಾಗುವ ಘೋಸ್ಟ್ ಆಟ ಪೊಲೀಸರ ತಂತ್ರಕ್ಕೆ ಪ್ರತಿ ತಂತ್ರವನ್ನು ಹೂಡುತ್ತಾ ಸಾಗುತ್ತದೆ. ಈ ಆಟದಲ್ಲಿ ಗೆಲ್ಲುವವರು ಯಾರು ಎನ್ನುವುದೇ ಸಿನಿಮಾದ ಕುತೂಹಲದ ಕಥಾ ಹಂದರ.

ಚಿತ್ರದಲ್ಲಿ ಹಾಡು, ಲವ್ , ಕಾಮಿಡಿ ಯಾವುದೂ ಇಲ್ಲ. 48 ಗಂಟೆಗಳಲ್ಲಿ ನಡೆಯುವ ಕಥೆಗೆ ಹಲವಾರು ಫ್ಲಾಶ್ ಬ್ಯಾಕ್ ಗಳಿವೆ. ಕಥೆ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗಲು ತಾಳ್ಮೆಯಿಂದ ಕೊನೆಯವರೆಗೆ ಚಿತ್ರವನ್ನು ನೋಡುವುದು ಒಳ್ಳೆಯದು.

ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಶಿವಣ್ಣ ಸೂಪರ್. ಅವರ ಪಾತ್ರದ ಖದರ್ ಪ್ರೇಕ್ಷಕರಿಗೆ ಇಷ್ಟ ಅನಿಸುತ್ತದೆ. ಶಿವಣ್ಣ ಅವರನ್ನು ಚಿಕ್ಕ ವಯಸ್ಸಿಗೆ ಅನುಗುಣವಾಗಿ ತೋರಿಸಲಾಗಿದೆ. ಅವರ ಎನರ್ಜಿ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಅವರು ಚಿತ್ರದಲ್ಲಿ ಹೆಚ್ಚು ಮಾತನಾಡಿಲ್ಲ. ಆದರೆ ಅವರ ಕಣ್ಣುಗಳು ಅಭಿನಯ ಹೊರಹಾಕಿವೆ.

ಮಲಯಾಳಂ ನಟ ಜಯರಾಂ ಅವರು ದೊಡ್ಡ ಪಾತ್ರವನ್ನು ಮಾಡಿದ್ದು ಇಡೀ ಸಿನಿಮಾ ಆವರಿಸಿಕೊಂಡಿರುವುದು ವಿಶೇಷ ಆಗಿದೆ. ಅನುಪಮ್ ಖೇರ್ ಗೆ ಹೆಚ್ಚು ಕೆಲಸ ಇಲ್ಲ. ಅವರು ಕೇವಲ ಒಂದೇ ದೃಶ್ಯದಲ್ಲಿ ದರ್ಶನ ತೋರುತ್ತಾರೆ. ಟಿವಿ ಆಂಕರ್ ಆಗಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ.

ಚಿತ್ರದ ಮೊದಲಾರ್ಧ ಕೆಲವೊಮ್ಮೆ ನಿಧಾನ ಎನಿಸುತ್ತದೆ. ಆದರೆ ದ್ವಿತೀಯಾರ್ಧ ವೇಗವಾಗಿ ಸಾಗಿ ಹಲವು ತಿರುವುಗಳನ್ನು ಪಡೆಯುತ್ತದೆ. ಅನವಶ್ಯಕ ದೃಶ್ಯಗಳನ್ನು ನಿರ್ದೇಶಕರು ಚಿತ್ರದಲ್ಲಿ ತಂದಿಲ್ಲ. ಆದರೆ ಪೊಲೀಸ್ ಹಾಗೂ ಡಾನ್ ನಡುವಣ ತಂತ್ರ, ಪ್ರತಿ ತಂತ್ರದಲ್ಲಿ ಪ್ರೇಕ್ಷಕರು ಗೊಂದಲಕ್ಕೆ ಒಳಗಾಗುವ ಸನ್ನಿವೇಶವು ಇದೆ.

ಮಹೇಂದ್ರ ಸಿಂಹ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತದ ಅಬ್ಬರ ಚಿತ್ರಕ್ಕೆ ಮೈಲೇಜ್ ನೀಡಿದೆ.

ಶಿವಣ್ಣ ಅವರನ್ನು ಬೇರೆ ರೇಂಜ್ ನಲ್ಲಿ ನೋಡಲು ಇಷ್ಟಪಡುವ ಅವರ ಕಟ್ಟಾ ಅಭಿಮಾನಿಗಳಿಗೆ ಚಿತ್ರ ಖುಷಿ ಕೊಡದೆ ಇರಬಹುದು. ಆದರೆ ನಿರ್ದೇಶಕ ಶ್ರೀನಿ ಚಿತ್ರಕಥೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬುದ್ಧಿವಂತ ಚಿತ್ರವಾಗಿ ಇದನ್ನು ತೆರೆಯ ಮೇಲೆ ತಂದಿದ್ದಾರೆ.
*********

Be the first to comment

Leave a Reply

Your email address will not be published. Required fields are marked *

Translate »
error: Content is protected !!