“ರಾಜ್ಯದ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, “ವಿವಿಧ ಕ್ಷೇತ್ರಗಳಿಗೆ ಶೇಕಡ 100 ರಷ್ಟು ಅವಕಾಶ ಮಾಡಿಕೊಟ್ಟಿರುವ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಶೇ. 50ರ ನಿಯಮ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಚಿತ್ರವನ್ನು ಕಷ್ಟದಿಂದ ಪಾರು ಮಾಡಲು ಶೇ. 100 ರಷ್ಟು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“ಪುನೀತ್ ಅವರನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ನೋವು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ, ನೋವಿನ ಜೊತೆ ಬದುಕುತ್ತಿದ್ದೇವೆ. ಅಪ್ಪು ಅಗಲಿ ಮೂರು ತಿಂಗಳು ಕಳೆದರೂ ಅಭಿಮಾನಿಗಳು ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಾ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
“ಮೈಸೂರಿನ ಶಕ್ತಿಧಾಮಕ್ಕೆ ಇತ್ತೀಚಿಗೆ ನಾನು ಹೆಚ್ಚಾಗಿ ಬರುತ್ತಿರುವುದು ಮಕ್ಕಳಿಗೆ ಹೊಸ ಅನುಭವ ಆಗಿದೆ. ಶಕ್ತಿಧಾಮದ ಉಸ್ತುವಾರಿಯನ್ನು ಗೀತಾ ವಹಿಸಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳನ್ನು ಕರೆದುಕೊಂಡು ಬಸ್ ನಲ್ಲಿ ನಾನೇ ಒಂದು ಸುತ್ತು ಹಾಕಿದೆ. ಇದು ಅತ್ಯಂತ ಖುಷಿಕೊಟ್ಟ ಸಂಗತಿ’ ಎಂದು ಅವರು ಹೇಳಿದರು.
ಇಂದು ರಾತ್ರಿಯಿಂದ ಸರಕಾರ ನೈಟ್ ಕರ್ಫ್ಯೂ ತೆಗೆದು ಹಾಕಿದೆ. ಆದರೆ ಚಿತ್ರಮಂದಿರಗಳಲ್ಲಿ ಶೇಕಡ 50 ಪ್ರೇಕ್ಷಕರ ಉಪಸ್ಥಿತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದು ಚಿತ್ರರಂಗದ ಅಸಮಾಧಾನಕ್ಕೆ ಕಾರಣವಾಗಿದೆ.
____

Be the first to comment