ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಅವರೊಂದಿಗೆ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ, ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡು ಮೂರು ವರ್ಷಗಳಾಗಿವೆ. 2017ರಲ್ಲಿ ಉಪ್ಪು ಹುಳಿ ಖಾರ ಚಿತ್ರದ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣದ ಪಯಣ, ಇದೀಗ ಯೋಗರಾಜ್ ಭಟ್ ಅವರ ಗಾಳಿಪಟ 2 ವರೆಗೆ ಬಂದು ನಿಂತಿದೆ.
ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಸಬ್ಜೆಕ್ಟ್ಗಳು ಸಿಕ್ಕರೆ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುವ ಮನದಾಸೆ ರಮೇಶ್ ರೆಡ್ಡಿ ಅವರದ್ದು. ಇದೀಗ ಇದೇ ನಿರ್ಮಾಪಕರಿಗೆ ಇತ್ತೀಚೆಗೆ ನಡೆದ ಖಾಸಗಿ ಸಮಾರಂಭದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ, ರಮೇಶ್ ಅರವಿಂದ್, ನಟ ಶ್ರೀಮುರಳಿ ಸನ್ಮಾನಿಸಿದರು.
ರಮೇಶ್ ರೆಡ್ಡಿ ಅವರ ಸುರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈಗಾಗಲೇ ಹಲವು ಭಿನ್ನವಿಭಿನ್ನ ಸಿನಿಮಾಗಳು ನಿರ್ಮಾಣವಾಗಿವೆ. ಉಪ್ಪು ಹುಳಿ ಖಾರ, ಪಡ್ಡೆಹುಲಿ, ನಾತಿಚರಾಮಿ ಸಿನಿಮಾಗಳು ಈಗಾಗಲೇ ತೆರೆಕಂಡು ಒಳ್ಳೆ ಹೆಸರು ಮಾಡಿವೆ. ಅದೇ ರೀತಿ ರಮೇಶ್ ಅರವಿಂದ್ ಅವರ ನಿರ್ದೇಶನದ ಮತ್ತು ನಾಯಕನಾಗಿ ನಟಿಸಿರುವ 100 ಚಿತ್ರ ಬಹುತೇಕ ಚಿತ್ರೀಕರಣ ಕೆಲಸ ಮುಗಿಸಿಕೊಂಡು, ಬಿಡುಗಡೆಗೆ ಸಿದ್ಧವಾಗಿದೆ.
ಇತ್ತ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರಕ್ಕೂ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು, ಆ ಚಿತ್ರದ ಶೇ. 60 ಶೂಟಿಂಗ್ ಮುಕ್ತಾಯವಾಗಿದೆ.ಈ ನಿರ್ಮಾಣ ಸಂಸ್ಥೆ ಹಿಂದಿನ ಒಂದಷ್ಟು ಶ್ರಮವನ್ನೂ ರಮೇಶ್ ರೆಡ್ಡಿ ನೆನಪು ಮಾಡಿಕೊಂಡಿದ್ದಾರೆ. 1982ರಲ್ಲಿ ಗಾರೆ ಕೆಲಸಕ್ಕೆಂದು ಬಂದು ಇದೀಗ ಸ್ಯಾಂಡಲ್ವುಡ್ ನಿರ್ಮಾಪಕರಲ್ಲಿ ಒಬ್ಬನಾಗಿದ್ದೇನೆ.
ಕಟ್ಟಡ ಗುತ್ತಿಗೆದಾರನಾಗಿ ಈ ಹಂತಕ್ಕೆ ನಾನು ಬಂದಿದ್ದೇನೆ ಎಂದರೆ ಅದಕ್ಕೆ ದೇವ್ರೇ ಕಾರಣ. ಆ ದೇವ್ರು ಬೇರೆ ಯಾರೂ ಅಲ್ಲ ಇನ್ಫೋಸಿಸ್ನ ಸುಧಾಮೂರ್ತಿ ಅಮ್ಮನವರು. ಅವರಿಲ್ಲ ಎಂದಿದ್ದರೆ ನಾವು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇವರ ಜತೆಗೆ ಸಿವಿ ಕರ್ನಲ್ ಕೃಷ್ಣ, ರಾಮದಾಸ್ ಕಾಮತ್ ಮತ್ತು ಸಂಜಯ್ ಭಟ್ ಅವರನ್ನೂ ನೆನೆಯಲೇ ಬೇಕು.
ನನ್ನ ಆರಂಭದ ದಿನಗಳಲ್ಲಿ ತುಂಬ ಸಹಾಯ ಮಾಡಿದರು ಎಂದು ಅವರೆಲ್ಲರ ಸಹಾಯವನ್ನು ನೆನೆಯುತ್ತಾರೆ ರಮೇಶ್ ರೆಡ್ಡಿ.
ಸುರಾಜ್ ಸಿನಿಮಾ ಮೂಲಕ ಒಳ್ಳೊಳ್ಳೆ ಸಿನಿಮಾಗಳನ್ನು ಕನ್ನಡಿಗರಿಗೆ ಕೊಡುವುದು ರಮೇಶ್ ರೆಡ್ಡಿ ಅವರ ಮೂಲಮಂತ್ರ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾಕ್ಷೇತ್ರದಲ್ಲಿಯೇ ಇರುವುದಾಗಿಯೂ ಅವರು ಹೇಳಿಕೊಳ್ಳುತ್ತಾರೆ.
ಇತ್ತ ಮುಂದಿನ ವರ್ಷಕ್ಕೆ 100 ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಪ್ಲ್ಯಾನ್. ಅದೇ ರೀತಿ ಶೇ. 60 ಚಿತ್ರೀಕರಣ ಮುಗಿಸಿಕೊಂಡಿರುವ ಗಾಳಿಪಟ 2 ಚಿತ್ರದ ಹಾಡುಗಳನ್ನು ಜಾರ್ಜಿಯಾದಲ್ಲಿ ಸೆರೆಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Be the first to comment