ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ಬೇರೆಯವರು ಧ್ವನಿ ನೀಡಲಿ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಗೆ ವಾಯ್ಸ್ ನೀಡುವ ಬಗ್ಗೆ ಮಾತನಾಡಿರುವ ಅವರು, “ನನ್ನ ಧ್ವನಿ ಅಪ್ಪುಗೆ ಸೂಟ್ ಆಗಲ್ಲ. ಒಳ್ಳೆ ವಾಯ್ಸ್ ಇರುವವರು ವಾಯ್ಸ್ ನೀಡಲಿ. ಒಂದು ವೇಳೆ ನಾನೇ ಆಗಬೇಕೆಂದರೆ ನಾನು ಧ್ವನಿ ನೀಡಲು ರೆಡಿ ಇದ್ದೇನೆ” ಎಂದು ಹೇಳಿದ್ದಾರೆ.
ಜೇಮ್ಸ್ ಚಿತ್ರತಂಡ ಸಿನಿಮಾವನ್ನು 2022ರಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವಾದ ಮಾರ್ಚ್ 17ರಂದು ರಿಲೀಸ್ ಮಾಡಲು ಯೋಜನೆ ರೂಪಿಸಿದೆ. ಪುನೀತ್ ಪಾತ್ರಕ್ಕೆ ಧ್ವನಿ ನೀಡುವವರು ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ಕಡೆ ಚಿತ್ರತಂಡ ಶೂಟಿಂಗ್ ವೇಳೆ ಪುನೀತ್ ಅವರ ಧ್ವನಿಯನ್ನು ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಇನ್ನೊಂದು ಕಡೆ ಬೇರೆಯವರಿಂದ ಧ್ವನಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಈಗಾಗಲೇ ಚಿತ್ರತಂಡ ಆರಂಭಿಸಿದೆ. ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ರಾಜಕುಮಾರ ಸಿನಿಮಾದಲ್ಲಿ ನಾಯಕಿಯಾಗಿದ್ದ ಪ್ರಿಯಾ ಆನಂದ್ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ತಮಿಳು ನಟ ಶರತ್ ಕುಮಾರ್ ವಿಲನ್ ಪಾತ್ರ ಮಾಡಿದ್ದು, ಚಿಕ್ಕಣ್ಣ, ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ, ಅನು ಪ್ರಭಾಕರ್, ಶ್ರೀಕಾಂತ್, ಆದಿತ್ಯ ಮೆನನ್ ತಾರಾ ಬಳಗದಲ್ಲಿ ಇದ್ದಾರೆ.
ಎರಡನೇ ಲಾಕ್ ಡೌನ್ ಬಳಿಕ ಪುನೀತ್ ರಾಜ್ ಕುಮಾರ್ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಜೇಮ್ಸ್ ಚಿತ್ರ ಬಿಡುಗಡೆ ಆಗುವ ಮುನ್ನವೇ ಪುನೀತ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಗಲಿದ್ದು ಪುನೀತ್ ಅಭಿಮಾನಿ ಹಾಗೂ ಕನ್ನಡ ಚಿತ್ರರಂಗವನ್ನು ಇನ್ನು ಆಘಾತಕ್ಕೆ ದೂಡಿದೆ.
___

Be the first to comment