ಭೈರತಿ ರಣಗಲ್

ಮಹತ್ವಾಕಾಂಕ್ಷೆ ಇರುವ ಸಿನಿಮಾ ‘ಭೈರತಿ ರಣಗಲ್‌’

‘ಭೈರತಿ ರಣಗಲ್‌’ ರಿವೇಂಜ್‌ ಕಥೆ ಅಲ್ಲ. ಒಂದು ಮಹತ್ವಾಕಾಂಕ್ಷೆ ಇರುವ ಸಿನಿಮಾ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್‌,  ‘ಏತಕ್ಕೆ ಏಕಾಏಕಿ ಭೈರತಿ ರಣಗಲ್‌ ಮಾಡುತ್ತಿದ್ದೀರಿ’ ಎಂದು ಹಲವರು ಕೇಳಿದರು. ಈ ಸಿನಿಮಾ ಮಾಡಬೇಕು ಎನ್ನುವ ಯೋಚನೆ ‘ಮಫ್ತಿ’ ಮಾಡುವಾಗಲೇ ಇತ್ತು. ನರ್ತನ್‌ ಜೊತೆ ಆಗಲೇ ನಾನು ಚರ್ಚಿಸಿದ್ದೆ. ಶೇಕಡ 30-40 ಕಥೆ ಆಗಲೇ ಸಿದ್ಧವಿತ್ತು. ಕಥೆ ಬೆಳೆಯುತ್ತಾ ರುಕ್ಮಿಣಿ ವಸಂತ್‌, ರಾಹುಲ್‌ ಬೋಸ್‌, ಅವಿನಾಶ್‌, ಗೋಪಾಲಕೃಷ್ಣ ದೇಶಪಾಂಡೆ, ಶಬೀರ್‌ ಅವರ ಪಾತ್ರಗಳು ಸೇರಿಕೊಂಡವು’ ಎಂದರು.

”ಮಫ್ತಿ’ ಶ್ರೀಮುರಳಿ ಸಿನಿಮಾ . ಅದರಲ್ಲಿ ಮೊದಲಾರ್ಧದ ಬಳಿಕ ‘ಭೈರತಿ ರಣಗಲ್‌’ ಪಾತ್ರದ ಪ್ರವೇಶವಾಗಿತ್ತು. ಈ ಬಗ್ಗೆ ನರ್ತನ್‌ ಹೇಳಿದಾಗ ಹೆಚ್ಚು ಕಡಿಮೆ ಆದರೆ ಏನು ಎಂಬ ಭಯವಿತ್ತು. ಗೀತಾ ಜೊತೆ ಚರ್ಚಿಸಿ ಸಿನಿಮಾ ಒಪ್ಪಿಕೊಂಡೆ.  ‘ಭೈರತಿ ರಣಗಲ್‌’ ಎಂಬ ಪಾತ್ರವನ್ನು ಜನರು ವಿಜ್ರಂಭಣೆಯಿಂದ ಸ್ವೀಕರಿಸಿದರು ಎಂದು ತಿಳಿಸಿದರು.

‘ಮಫ್ತಿ’ಯ ಪ್ರೀಕ್ವೆಲ್‌ ‘ಭೈರತಿ ರಣಗಲ್‌’. ‘ಭೈರತಿ ರಣಗಲ್‌’ನ ಸೀಕ್ವೆಲ್‌ ಬರಲಿದೆ. ಇದರೊಂದಿಗೆ ಕಥೆಗೊಂದು ಅಂತ್ಯ ಸಿಗಲಿದೆ. ಇದೊಂದು ರಿವೇಂಜ್‌ ಕಥೆ ಅಲ್ಲ. ಒಂದು ಮಹತ್ವಾಕಾಂಕ್ಷೆ ಇರುವ ಸಿನಿಮಾ ಎಂದರು.

ನರ್ತನ್‌ ಕೆಲಸದಲ್ಲಿ ಮೌಲ್ಯಯುತ ಅಂಶಗಳು ಇರುತ್ತವೆ. ಅವರಿಗೆ ಸಿನಿಮಾ ಬಗ್ಗೆ ಅಪಾರ ಪ್ರೀತಿ ಇರುವುದು ತಿಳಿಯುತ್ತದೆ. ಸಿನಿಮಾ ಪೂರ್ಣಗೊಳಿಸಿದ್ದೇ ಅರಿವಿಗೆ ಬರಲಿಲ್ಲ ಎಂದಿದ್ದಾರೆ ಶಿವರಾಜ್ ಕುಮಾರ್.

‘ಭೈರತಿ ರಣಗಲ್’ ಸಿನಿಮಾ ನ.15ರಂದು ಬಿಡುಗಡೆಯಾಗುತ್ತಿದೆ.  ಸಿನಿಮಾವನ್ನು ‘ಗೀತಾ ಪಿಕ್ಚರ್ಸ್‌’ ಲಾಂಛನದಡಿ ಗೀತಾ ಶಿವರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ನರ್ತನ್‌ ಆಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾ ‘ಮಫ್ತಿ’ ಸಿನಿಮಾದ‌ ಪ್ರೀಕ್ವೆಲ್.

Be the first to comment

Leave a Reply

Your email address will not be published. Required fields are marked *

Translate »
error: Content is protected !!