Ramesh: ಇದೇ ಶುಕ್ರವಾರ ಶಿವಾಜಿ ಸುರತ್ಕಲ್‌ 2 ತೆರೆಗೆ

ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ನ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಏಪ್ರಿಲ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ.

ಮೊದಲ ಭಾಗದಂತೆಯೇ ಈ ಚಿತ್ರ ಒಂದು ಮರ್ಡರ್ ಮಿಸ್ಟ್ರಿಯಾಗಿದೆ. ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಕೊಲೆಗಾರ ಯಾರು? ಎನ್ನುವುದು ಚಿತ್ರದ ಸಸ್ಪೆನ್ಸ್‌ ಆಗಿದೆ.

ಮೊದಲ ಭಾಗ ನೋಡಿದವರಿಗೆ ಈ ಚಿತ್ರಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ಇದು ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ.

ಚಿತ್ರವನ್ನು ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮೊದಲಾದ ಕಡೆ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಸಂಕಲನ ಮಾಡಿರುವುದು ಚಿತ್ರದ ಮೇಲೆ ನಿರ್ದೇಶಕರ ಬಿಗಿ ಹಿಡಿತಕ್ಕೆ ಕಾರಣವಾಗಿದೆ.

ಚಿತ್ರ ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ ಎನ್ನುವುದಕ್ಕೆ ಶುಕ್ರವಾರ ಸಾಕ್ಷಿ ಒದಗಿಸಲಿದೆ.
—-

Be the first to comment

Leave a Reply

Your email address will not be published. Required fields are marked *

Translate »
error: Content is protected !!