ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಶೀತಲ್ ಶೆಟ್ಟಿ ಇದೀಗ ನಿರ್ದೇಶಕಿಯಾಗಿಯೂ ನೆಲೆ ಕಂಡುಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ‘ಸಂಗಾತಿ’ ಎಂಬ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಗಂಡಾಗಲಿ, ಹೆಣ್ಣಾಗಲಿ ಸಂಗಾತಿಯೆಂಬ ಅನುಭೂತಿ ಹುಟ್ಟಿಸುವ ಜೀವ ಯಾವುದಾದರೂ ಆಗಬಹುದು ಎಂಬ ಸೂಕ್ಷ್ಮ ತಳಹದಿಯ ಕಥೆ ಹೊಂದಿದ್ದ ‘ಸಂಗಾತಿ’ ಮೆಚ್ಚುಗೆ ಗಳಿಸಿಕೊಂಡಿತ್ತು. ಈ ನಡುವೆ ಪತಿ ಬೇಕು ಡಾಟ್ ಕಾಮ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೂ ಶೀತಲ್ ಅವರ ಪ್ರಧಾನ ಆಸಕ್ತಿ ನಿರ್ದೇಶನ ಎಂಬುದಕ್ಕೆ ಸಾಕ್ಷಿಯೆಂಬಂತೆ ‘ಕಾರು’ ಎಂಬ ಕಿರುಚಿತ್ರ ರೂಪುಗೊಂಡಿದೆ. ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಎರಡನೇ ಕಿರುಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.
ಪುಟ್ಟ ವಯಸ್ಸಿನಲ್ಲಿ ಎಲ್ಲರನ್ನೂ ಒಂದೊಂದು ವಿಚಾರಗಳು ಕಾಡಿರುತ್ತವೆ. ಅವುಗಳೆಲ್ಲ ಆ ಎಳೇ ಮನಸುಗಳಲ್ಲಿ ನಾನಾ ಕಲ್ಪನೆಗಳಾಗಿ ಗರಿ ಬಿಚ್ಚಿಕೊಂಡಿರುತ್ತವೆ. ಹಾಗೆಯೇ ಇಲ್ಲಿ ಎಳೇ ವಯಸ್ಸಿನ ಹೆಣ್ಣು ಮಗುವೊಂದನ್ನು ಕಾರೊಂದು ಬೆರಗಿನಂತೆ ಕಾಡುವ ಕಥಾನಕ `ಕಾರು’ ಕಿರುಚಿತ್ರದ ಪ್ರಧಾನ ಅಂಶ. ಈ ಕಥಾ ಎಳೆಯೊಂದಿಗೆ ಸೀಮಿತಾವಧಿಯಲ್ಲಿಯೇ ಗಹನವಾದುದೇನನ್ನೋ ಹೇಳಲು ಶೀತಲ್ ಪ್ರಯತ್ನಿಸಿದ್ದಾರಂತೆ. ಈ ಕಿರುಚಿತ್ರ ಪ್ರತೀ ಪ್ರೇಕ್ಷಕರರಿಗೂ ತಮ್ಮನ್ನು ಕಾಡಿದ ಕನಸೊಂದರ ಕಿರುಬೆರಳು ಮನಸಿಗೆ ಸೋಕಿದಂಥಾ ಆಹ್ಲಾದ ಮೂಡಿಸುವಂತೆ ರೂಪುಗೊಂಡಿದೆ ಎಂಬ ಭರವಸೆ ಶೀತಲ್ ಅವರಲ್ಲಿದೆ.
ಈ ಕಥೆಗೆ ಹೊಂದುವಂಥಾ ಹೆಣ್ಣು ಮಗುವನ್ನು ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಬಹುತೇಕ ಚಿತ್ರೀಕರಣವನ್ನು ಮಾರ್ಕೋನಹಳ್ಳಿ ಡ್ಯಾಂ ಸುತ್ತಮುತ್ತಲ ಚೆಂದದ ಪ್ರದೇಶಗಳಲ್ಲಿ ನಡೆಸಲಾಗಿದೆ. ಶೀತಲ್ ನಿರ್ದೇಶಕಿಯಾಗುವ ಹಾದಿಯಲ್ಲಿ ಜೊತೆಯಾಗಿದ್ದ ಶಿವು ಮತ್ತು ಪಚ್ಚಿ ಈ ಕಿರು ಚಿತ್ರದಲ್ಲಿಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಡುವೆ ಅಂತರವಿರಲಿ ಖ್ಯಾತಿಯ ಯೋಗೀಶ್ವರ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ಅನಂತ್ ಕಾಮತ್ ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ. ಮೀಡಿಯಾ ಮನೆ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಾರು ಇದೇ ಡಿಸೆಂಬರ್ 15ರಂದು ಪ್ರೇಕ್ಷಕರ ಮುಂದೆ ಬರಲಿದೆ.
Be the first to comment