ಕವಯತ್ರಿ, ರಾಜ್ಯಪಾಲೆ ಆಗಿದ್ದ ‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು ಕುರಿತಾದ ಸಿನಿಮಾ ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿದೆ.
ಕತೆಗಾರ ಧೀರಜ್ ಮಿಶ್ರ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ ಇದಕ್ಕಾಗಿ ಕಳೆದ ಎಂಟು ವರ್ಷ ಸರೋಜಿನಿ ನಾಯ್ಡು ಬಗ್ಗೆ ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ.
ಸರೋಜಿನಿ ನಾಯ್ಡು ಪಾತ್ರದಲ್ಲಿ ಸೋನಲ್ ಮೊಂಟಾರೊ ಹಾಗೂ ಶಾಂತಿಪ್ರಿಯ ನಟಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಸಣ್ಣ ವಯಸ್ಸಿನ ಪಾತ್ರದಲ್ಲಿ ಸೋನಲ್ ಮೊಂಟಾರೊ ನಟಿಸಿದರೆ, ಶಾಂತಿಪ್ರಿಯ ವಯಸ್ಸಾದ ಪಾತ್ರದಲ್ಲಿ ನಟಿಸಲಿದ್ದಾರೆ. ಶಾಂತಿಪ್ರಿಯ ಎರಡು ದಶಕಗಳ ಬಳಿಕ ಈ ಸಿನಿಮಾದ ಮೂಲಕ ನಟನೆಗೆ ಮರಳುತ್ತಿದ್ದಾರೆ.
ಸರೋಜಿನಿ ನಾಯ್ಡು ಕುರಿತ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ ಹಾಗೂ ಇತರ ಕೆಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.
”ಸರೋಜಿನಿ ನಾಯ್ಡು ಅವರು ಸ್ಕಾಲರ್‌ಶಿಫ್ ಪಡೆದು ಲಂಡನ್‌ಗೆ ಹೋಗಿ ವಿದ್ಯಾಭ್ಯಾಸ ಮಾಡಿದರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಹಲವು ದೇಶಗಳಿಗೆ ಅವರು ಅಧ್ಯಯನ ಪ್ರವಾಸ ಮಾಡಿದ್ದರು. ಭಾರತಕ್ಕೆ ಬಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸರೋಜಿನಿ ನಾಯ್ಡು ಕುರಿತಾದ ಹಲವಾರು ಸಂಗತಿಗಳಿದ್ದು ಅವುಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಈ ಸಿನಿಮಾ ಮೂಲಕ ಮಾಡುತ್ತಿದ್ದೇವೆ” ಎಂದು ನಿರ್ದೇಶಕ ವಿನಯ್ ಚಂದ್ರ ಹೇಳಿದ್ದಾರೆ.
ಸಿನಿಮಾವನ್ನು ಬೆಂಗಳೂರು, ಹೈದರಾಬಾದ್ ಉತ್ತರ ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡಕ್ಕಿದೆ. 1878 ರಿಂದ 1920 ರ ನಡುವೆ ನಡೆವ ಕತೆ ಇದಾಗಿರಲಿದೆ. ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ಸಂಗೀತವನ್ನು ವಿನಯ್ ಚಂದ್ರ ನೀಡುತ್ತಿದ್ದಾರೆ.
ಸರೋಜಿನಿ ನಾಯ್ಡು ಅವರ ಕುಟುಂಬದಿಂದ ಸಿನಿಮಾ ಮಾಡಲು ಒಪ್ಪಿಗೆಯನ್ನು ಪಡೆಯಲಾಗಿದೆ. ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾವನ್ನು ಕನ್ನಡ, ಹಿಂದಿ ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲು ನಿರ್ಧರಿಸಲಾಗಿದೆ.
Be the first to comment