ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ‘ಶಾಲಿವಾಹನ ಶಕೆ’ ಸೆ.13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ.
ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ‘ಶಾಲಿವಾಹನ ಶಕೆ’ ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಗಿರೀಶ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಗಿರೀಶ್ ಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ಸುಪ್ರೀತಾ ಬಣ್ಣ ಹಚ್ಚಿದ್ದಾರೆ.
ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ದೇಶಕ ಮತ್ತು ನಾಯಕ ಗಿರೀಶ್, ‘ಶಾಲಿವಾಹನ ಈ ಸಿನಿಮಾದಲ್ಲಿ ಒಂದು ಹಳ್ಳಿಯ ಹೆಸರು. ಪೌರಾಣಿಕ ಹಿನ್ನಲೆ ಕೂಡ ಇದೆ. ಟ್ರೈಲರ್ ನಲ್ಲಿ ಕಾಣಿಸುವ ಶಂಖ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಟೈಮ್ ಲೂಪ್ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಹಳ್ಳಿ ಸೊಗಡೆನೊಂದಿಗೆ ಹೇಳಿದ್ದೇವೆ’ ಎಂದರು.
ನಾಯಕಿ ಸುಪ್ರೀತಾ ಮಾತನಾಡಿ, ‘ಇದೊಂದು ಮಾಮೂಲಿ ಕಥೆಯಲ್ಲ. ಒಂದು ವಿಭಿನ್ನವಾದ ಸಿನಿಮಾ. ಹಳ್ಳಿ ಸೊಗಡನ್ನು ಇಟ್ಟುಕೊಂಡು ಮಾಡಿರುವ ಟೈಮ್ ಲೂಪ್ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಒಂದು ವೇಳೆ ಲೈಫಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ’ ಎಂದರು.
ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, ‘ಇದೇ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾಲ್ಕರಿಂದ ಐದು ದಿನದಲ್ಲಿ ನಡೆಯುವ ಕಥೆ ಶಾಲಿವಾಹನ ಶಕೆ’ ಎಂದರು.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ಕಲಾವಿದ ಸುಂದರ್ ವೀಣಾ ಮಾತನಾಡಿ, ‘ ಈ ಚಿತ್ರದಲ್ಲಿ ಮುಸ್ಲಿಮ್ ದರ್ವೇಸಿ ಭೂಬಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ’ ಎಂದರು.
ಸಿನಿಮಾವನ್ನು ಬಹುತೇಕ ಕುಣಿಗಲ್ ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸಿ ಕ್ಯಾರೆಕ್ಟರ್ ಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ. ಸಿನಿಮಾದಲ್ಲಿ ಗಿರೀಶ್ ಹಾಗೂ ನಟಿ ಸುಪ್ರೀತಾ ಜೊತೆಗೆ ಚಿಲ್ಲರ್ ಮಂಜು, ಸುಂದರ್ ವೀಣಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಅರುಣ್ ಸುರೇಶ್ ಸಿನಿಮಾಟೋಗ್ರಫಿ, ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸೈಡ್ ವಿಂಗ್’ ಹೆಸರಿನಲ್ಲಿ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
—–

Be the first to comment