ಮಲಯಾಳಂ ನಟಿ ರಿನಿ ಜಾರ್ಜ್ ಅವರು ಶಾಸಕರೊಬ್ಬರು ತನಗೆ ಲೈಂಗಿಕ ಸಂದೇಶ ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಶಾಸಕರೊಬ್ಬರು ತಮಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಪಂಚತಾರಾ ಹೋಟೆಲ್‌ಗೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಈ ಕುರಿತು ತಾನು ದೂರು ನೀಡಿದ ಹೊರತಾಗಿಯೂ ಪಕ್ಷದ ನಾಯಕರು ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಸಾಮಾಜಿಕ ಮಾಧ್ಯಮದ ಮೂಲಕ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ ನಾನು ಮೊದಲು ಅವರಿಂದ ಆಕ್ಷೇಪಾರ್ಹ ಸಂದೇಶಗಳನ್ನು ಸ್ವೀಕರಿಸಿದೆ. ಹಲವು ಬಾರಿ ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿ ಕಾಯುತ್ತಿರುವುದಾಗಿ, ನೀನು ಕೂಡಲೇ ಬರುವಂತೆ ಒತ್ತಾಯಿಸಿದ್ದರು. ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಇಮೇಜ್ ಛಿದ್ರಗೊಂಡಿದೆ.
ನನ್ನ ದೂರಿನ ನಂತರವೂ ಅವರಿಗೆ ಪಕ್ಷದೊಳಗೆ ಹಲವಾರು ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಭದ್ರತಾ ಕಾರಣಗಳಿಂದಾಗಿ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆಯಿಂದಾಗಿ ದೂರನ್ನು ಮುಂದುವರಿಸುತ್ತಿಲ್ಲ. ರಾಜಕೀಯ ಪಕ್ಷವನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ಆದರೆ ಮಹಿಳೆಯರನ್ನು ಬೆಂಬಲಿಸಲು ಮಾತನಾಡುತ್ತಿದ್ದೇನೆ ಎಂದು ರಿನಿ ಜಾರ್ಜ್ ಹೇಳಿದ್ದಾರೆ.
ಆರೋಪಿಯ ಹೆಸರು, ಪಕ್ಷದ ಹೆಸರನ್ನು ಬಹಿರಂಗಪಡಿಸಲು ನಟಿ ನಿರಾಕರಿಸಿದ್ದಾರೆ. ಆದರೆ ಕೇರಳದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಅವರ ಪಾಲಕ್ಕಾಡ್ ಜಿಲ್ಲೆಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದೆ. ಆದರೆ ಈ ಬಗ್ಗೆ ಮಂಕೂಟ್ಟಿಲ್ ಅಥವಾ ಕಾಂಗ್ರೆಸ್‌ನಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಪಕ್ಷದ ನಾಯಕತ್ವ ವರದಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
—-





Be the first to comment