ಲೂಸ್ ಮಾದ ಖ್ಯಾತಿಯ ಯೋಗಿ ನಟನೆಯ ಬಹುನಿರೀಕ್ಷಿತ ಚಿತ್ರ ಲಂಕೆ ಸೆಪ್ಟೆಂಬರ್ 10ರಂದು ಬಿಡುಗಡೆಯಾಗಲಿದ್ದು, ಚಿತ್ರದ ಟ್ರೈಲರ್ ಸೆಪ್ಟೆಂಬರ್ 3ಕ್ಕೆ ರಿಲೀಸ್ ಆಗಲಿದೆ.
ಚಿತ್ರದ ನಿರ್ದೇಶಕ ರಾಮ್ ಪ್ರಸಾದ್ ಅವರು ಕರ್ನಾಟಕದಾದ್ಯಂತ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಕರೋನಾ ಕಾರಣದಿಂದ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ನೀಡಿದ್ದರಿಂದ ಚಿತ್ರದ ಬಿಡುಗಡೆಯನ್ನು ಎರಡು ಬಾರಿ ಮುಂದೂಡಲಾಗಿತ್ತು. ಈಗ ಕೊನೆಗೂ ಚಿತ್ರ ಬೆಳ್ಳಿತೆರೆಯ ಮೇಲೆ ಬರುತ್ತಿದೆ.
‘ಲಂಕೆ’ ಚಿತ್ರದಲ್ಲಿ ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೀರೋ ಹೋರಾಡುವ ಕಥೆ ಇದೆ. ಆಕ್ಷನ್ ಪ್ರಕಾರದ ಈ ಸಿನೆಮಾ ಸಾಕಷ್ಟು ಕುತೂಹಲವನ್ನು ಈಗಾಗಲೇ ಮೂಡಿಸಿದೆ.
“ಮಾಸ್ ಎಂಟರ್‌ಟೇನ್‌ಮೆಂಟ್ ಆಗಿರುವ ಈ ಚಿತ್ರದಲ್ಲಿ ಮೆಸೇಜ್ ನೀಡುವ ಯತ್ನ ಮಾಡಲಾಗಿದೆ. ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎಂದು ‘ಲಂಕೆ’ ಸಿನಿಮಾ ನಿರ್ದೇಶಕ ರಾಮ್ ಪ್ರಸಾದ್ ಎಂ. ಡಿ. ಹೇಳಿದ್ದಾರೆ.
ಚಿತ್ರವನ್ನು ಬೆಂಗಳೂರು, ಸಂಗಮ ಫಾರೆಸ್ಟ್‌ನಲ್ಲಿ ಚಿತ್ರೀಕರಿಸಲಾಗಿದ್ದು ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರುವ ಯತ್ನ ಮಾಡಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಸಂಚಾರಿ ವಿಜಯ್ ಅವರೂ ಸಹ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಚಿತ್ರದ ವಿಶೇಷ ಆಗಿದೆ.
ಇದುವರೆಗೆ ಅಭಿಮಾನಿಗಳು ನೋಡದ ಯೋಗಿಯನ್ನು ಸಿನಿಮಾದಲ್ಲಿ ತೋರಿಸುವ ಯತ್ನ ಮಾಡಲಾಗಿದೆ. ಯೋಗಿ ಅವರ ಸಿನಿ ಬದುಕಿನಲ್ಲಿ ಈ ಚಿತ್ರ ತಿರುವು ನೀಡುತ್ತದೆ ಎನ್ನುವ ನಂಬಿಕೆಯನ್ನು ನಿರ್ದೇಶಕ ರಾಮ್‌ಪ್ರಸಾದ್ ಹೊಂದಿದ್ದಾರೆ.
ಯೋಗೇಶ್ ಜೊತೆಗೆ ಕಾವ್ಯ ಶೆಟ್ಟಿ, ಕೃಷಿ ತಾಪಂಡ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದಾರೆ. ಚಿತ್ರವನ್ನು ಶ್ರೀನಿವಾಸ್ ನಾಗವಾರ, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.
—————-
Be the first to comment