ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಶಿವರಾಂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಜರಿ ನಡೆಸುವಷ್ಟು ಅವರು ಚೇತರಿಕೆ ಕಾಣದ ಕಾರಣ ಶಿವರಾಂ ವಿಚಾರದಲ್ಲಿ ಏನೂ ಹೇಳಲು ಸಾಧ್ಯ ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಶಿವರಾಂ ಅವರಿಗೆ ಈಗ 84 ವರ್ಷ ವಯಸ್ಸು ಆಗಿದೆ. ಮಿದುಳು ನಿಷ್ಕ್ರಿಯಗೊಂದಿದ್ದು ಅವರು ಕೋಮಾ ಸ್ಥಿತಿ ತಲುಪಿದ್ದಾರೆ. ಇಂದು ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಹದಗೆಡುತ್ತಿದ್ದು, ಶೀಘ್ರದಲ್ಲೇ ವೈದ್ಯರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಅನೇಕ ಹಿರಿಯ ನಟ-ನಟಿಯರು ಬಂದು ಶಿವರಾಂ ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಶಿವರಾಂ ಕೋಮಾ ಹಂತ ತಲುಪಿದ್ದು, ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ.
ಬಣ್ಣದ ಲೋಕದಲ್ಲಿ ಶಿವರಾಂ ಅವರ ಅನುಭವ 6 ದಶಕಗಳಿಗೂ ಹೆಚ್ಚು. ಅವರು ನಟ, ನಿರ್ಮಾಪಕ, ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಸಿನಿಮಾದ ಜೊತೆಗೆ ಕಿರುತೆರೆಯಲ್ಲಿ ಸಹ ಅವರು ಅಭಿನಯಿಸಿದ್ದಾರೆ.
ಶಿವರಾಂ ಅವರಿಗೆ ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರವಾಗಿ ಏಟು ಬಿದ್ದಿತ್ತು. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್, ಗಿರಿಜಾ ಲೋಕೇಶ್, ಶಿವರಾಜ್ ಕುಮಾರ್ ಮೊದಲಾದವರು ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದಾರೆ.
__________
Be the first to comment