ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಲ್ಬಂ ಹಾಡುಗಳನ್ನು ಕಾಣುತ್ತಿದ್ದೇವೆ. ಪಾರ್ಟಿ ಸಾಂಗ್, ಫ್ರೀಕ್ ಸಾಂಗ್ ಹೀಗೆ ಹಲವಾರು ವೆರೈಟಿ ಸಾಂಗ್ ಗಳನ್ನು ನೋಡಿದ್ದೇವೆ. ಈಗ ಮಕ್ಕಳಿಗಾಗಿ ಒಂದು ಆಲ್ಬಂ ಹಾಡನ್ನು ಸಾಯಿ ಲಕ್ಷ್ಮಣ್ ಮಾಡಿದ್ದಾರೆ. ಅದರ ಹೆಸರು ಸ್ಕೂಲೇ ನನ್ನ ಟೆಂಪಲ್.
ಹಿರಿಯ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಆಲ್ಬಂ ಸಾಂಗ್ ರಿಲೀಸ್ ಮಾಡಿದರು. ಚಾಮರಾಜ ಫಿಲಂ ಶಾಲೆಯ ಮಕ್ಕಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ನಂತರ ಮಾತನಾಡಿದ್ದ ಚಿನ್ನೇಗೌಡ್ರು, ಮಕ್ಕಳಿರಲವ್ವ ಮನೆತುಂಬ ಎನ್ನುವ ಮಾತಿದೆ. ಇಲ್ಲಿ ನನಗೆ ಆ ಮಾತು ನೆನಪಿಗೆ ಬರುತ್ತಿದೆ. ನಿರ್ಮಾಪಕ ಹಾಗೂ ನಿರ್ದೇಶಕರು ದೊಡ್ಡ ಸಾಹಸ ಮಾಡಿದ್ದಾರೆ. ಮಕ್ಕಳಿಂದ ಆಕ್ಟ್ ಮಾಡಿಸುವುದಕ್ಕೆ ತುಂಬಾ ಸಾಹಸ ಮಾಡಬೇಕು.
ಚಲಿಸುವ ಮೋಡಗಳು ಸಮಯದಲ್ಲಿ ಪುನೀತ್ ಕೈಲಿ ಆಕ್ಟ್ ಮಾಡಿಸುವಾಗ ಅದರ ಅನುಭವವಾಯ್ತು. ನೂರಾರು ಮಕ್ಕಳನ್ನು ಸೇರಿಸಿ ಈ ಹಾಡು ಮಾಡಿಸಿರುವುದು ಸೋಜಿಗದ ಸಂಗತಿ. ೩ದಿನದಲ್ಲಿ ಇಂಥ ಸಾಹಸ ಮಾಡಿರುವುದು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ಮಂಜುನಾಥ್ ಮಾತನಾಡುತ್ತಾ ಈ ಹಾಡಿನಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ. ಅನ್ಮೋಲ್, ಚಿನ್ಮಯ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲಾ ಮಕ್ಕಳಲ್ಲೂ ಒಂದು ವಿಶೇಷತೆ ಇರುತ್ತದೆ, ಅದನ್ನು ಹೆಕ್ಕಿ ಹೊರತರುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಈ ಹಾಡನ್ನು ನಿರ್ದೇಶನ ಮಾಡಿರುವ ಸಾಯಿ ಲಕ್ಷ್ಮಣ್ ಮಾತನಾಡಿ ಮಕ್ಕಳಲ್ಲಿ ಏನೋ ಒಂದು ಶಕ್ತಿ ಇದೆ. ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಈ ಪ್ರಯತ್ನ. ಕರೋನಾ ಅಂತ ಹೆದರಬೇಡಿ, ಕರೋನಾ ಮುಗೀತು, ಶಾಲೆ ಆಟ ಪಾಠ ಶುರುವಾಯಿತು, ಹೋಗೋಣ ಎನ್ನುವ ಸಂದೇಶ ಈ ಹಾಡಿನಲ್ಲಿದೆ.
ಕರೋನಾಗೆ ಕೋವ್ಯಾಕ್ಸಿನ್ ಬರಬಹುದು, ಆದರೆ ಮಕ್ಕಳಿಗೆ ನಮ್ಮ ಸಪೋರ್ಟ್ ಬೇಕು. ಮಕ್ಕಳು ಒಂದು ವರ್ಷದಿಂದ ಶಾಲೆಯನ್ನು ಮರೆತುಬಿಟ್ಟಿದ್ದಾರೆ. ಈ ಹಾಡು ಮಕ್ಕಳಿಗೆ ಶಕ್ತಿ ತುಂಬುತ್ತದೆ ಎಂದು ಹೇಳಿದರು.ದಲ್ಬಂಜನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಜಯ್ ದಲ್ಬಂಜನ್ ಈ ಹಾಡನ್ನು ನಿರ್ಮಿಸಿದ್ದಾರೆ.
ಶಿವರಾಮ್ ಬರೆದಿರುವ ಈ ಹಾಡನ್ನು ಗುರುಕಿರಣ್ ಹೆಗ್ಡೆ ಹಾಡಿದ್ದಾರೆ. ವಿನು ಮನಸು ಸಂಗೀತ ನೀಡಿದ್ದಾರೆ. ವಿಘ್ನೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ನಲ್ಲಿ ಜೂನಿಯರ್ ರಾಕಿ ಬಾಯ್ ಆಗಿ ನಟಿಸಿದ್ದ ಅನ್ಮೋಲ್ ವಿಜಯ್ ಭಟ್ಕಳ್ ಅತಿಥಿಪಾತ್ರದಲ್ಲಿ ನಟಿಸಿದ್ದಾರೆ. ೩೦೦ ಕ್ಕೂ ಅಧಿಕ ಮಕ್ಕಳು ಅಭಿನಯಿಸಿರುವುದು ಈ ವಿಡಿಯೋ ಸಾಂಗ್ ನ ವಿಶೇಷ.
ಈ ಆಲ್ಬಂ ಸಾಂಗ್ ಬಿಡುಗಡೆಗೆ ಸಾಕಷ್ಟು ಅತಿಥಿಗಳು ಆಗಮಿಸಿ ಶುಭ ಕೋರಿದರು.

Be the first to comment