ಚಿತ್ರ: ಸ್ಕೇರಿ ಫಾರೆಸ್ಟ್
ತಾರಾಗಣ: ಜಯಪ್ರಭು ಲಿಂಗಾಯತ್, ಟೀನಾ ಪೊನ್ನಪ್ಪ
ನಿರ್ದೇಶನ: ಸಂಜಯ್ ಅಬಿರ್
ನಿರ್ಮಾಣ: ಜಯಪ್ರಭು ಆರ್ ಲಿಂಗಾಯತ್
ಚಿತ್ರದ ಹೆಸರೇ ಸಿನಿಮಾದಲ್ಲಿ ಭಯಾನಕ ಸನ್ನಿವೇಶಗಳಿವೆ ಎನ್ನುವುದನ್ನು ಸೂಚಿಸುತ್ತವೆ. ಅಂಥದೊಂದು ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಕಾಲಿಡುವ ಪ್ರೇಕ್ಷಕರನ್ನು ನಿರಾಸೆಗೊಳಿಸದ ಚಿತ್ರ ಸ್ಕೇರಿ ಫಾರೆಸ್ಟ್ ಎನ್ನಬಹುದು.
ದಟ್ಟ ಕಾಡಿನಲ್ಲಿ ದಾರಿತಪ್ಪಿದ ವ್ಯಕ್ತಿಯೋರ್ವ ಅಲೆದಾಡುವ ದೃಶ್ಯಗಳ ಮೂಲಕ ಚಿತ್ರ ಆರಂಭವಾಗುತ್ತದೆ. ಆತನಿಗೆ ವ್ಯಕ್ತಿಯೋರ್ವರು ಕಾಡಿನ ನಡುವೆ ಇರುವ ತಮ್ಮ ಬಂಗಲೆಯಲ್ಲಿ ಆಶ್ರಯ ಪಡೆದುಕೊಳ್ಳಲು ಹೇಳಿ ಬೀಗದ ಕೈಗೊಂಚಲು ನೀಡಿ ಕಳುಹಿಸುತ್ತಾರೆ. ಹೋಗುವ ಮೊದಲು ಅಲ್ಲಿ ದೆವ್ವದ ಕಾಟ ಇದೆ ಎನ್ನುವ ಸೂಚನೆಯನ್ನು ಕೂಡ ನೀಡುತ್ತಾರೆ. ಆದರೆ ಆ ವ್ಯಕ್ತಿ ಧೈರ್ಯದಿಂದಲೇ ಆ ಬಂಗಲೆಯತ್ತ ಹೆಜ್ಜೆ ಹಾಕುತ್ತಾನೆ. ದಾರಿ ಮಧ್ಯೆ ಸಿಕ್ಕ ಹೆಣ್ಣು ದೆವ್ವಕ್ಕೆ ಮೋಕ್ಷ ನೀಡುತ್ತಾನೆ! ಆನಂತರ 20 ವರ್ಷಗಳ ಬಳಿಕದ ಕತೆಯನ್ನು ಹೇಳಲಾಗುತ್ತದೆ.
ನಾಲ್ಕು ಮಂದಿ ಸ್ನೇಹಿತರ ಕತೆ. ಅದರಲ್ಲಿ ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು. ಅವರಲ್ಲಿ ಇಬ್ಬರಿಗೆ ತಮ್ಮ ಗೆಳತಿಯೊಬ್ಬಳು ಕನಸಲ್ಲಿ ಬಂದು ತಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಹೇಳಿದಂಥಾಗುತ್ತದೆ! ಇತ್ತಿಚೆಗಷ್ಟೇ ಕಾಣೆಯಾಗಿರುವ ಪೀಹು ಎನ್ನುವ ಆ ಗೆಳತಿ ಕಾಣೆಯಾದ ಜಾಗಕ್ಕೆ ನಾಲ್ಕು ಮಂದಿಯೂ ಹೊರಡುತ್ತಾರೆ. ಅಂದಹಾಗೆ ಆಕೆ ಕಾಣೆಯಾಗಿದ್ದು ಅದೇ ಕಾಡಿನ ನಡುವೆ ಇದ್ದಂಥ ಬಂಗಲೆಯಲ್ಲಿ
ಕಾಡಿನ ಕಡೆಗೆ ಹೊರಡುವ ಜಯ್, ಸಿದ್, ಟೀಯಾ ಮತ್ತು ಕಾಯ್ರಾ ಅವರಿಗೆ ಏನಾಗುತ್ತದೆ? ಆ ಬಂಗಲೆಯಲ್ಲಿ ಕೆಲಸಗಾರನಾಗಿರುವ ಮಂಗಲ್ ಇವರು ಹೋಗುವಾಗ ಇರುತ್ತಾನ? ಬಂಗಲೆಯ ಮಾಲೀಕ ಆಶೀಷ್ ದಾಸ್ ಎನ್ನುವ ವ್ಯಕ್ತಿ ನಿಜಕ್ಕೂ ಯಾರು? ಜಯ್‌ನ ಪ್ರೇಯಸಿಯಾಗಿದ್ದಂಥ ಕಾಣೆಯಾಗಿರುವ ಪೀಹು ಕೊನೆಗೂ ಸಿಗುತ್ತಾಳ? ಎನ್ನುವ ಪ್ರಶ್ನೆಗಳು ಚಿತ್ರದ ಕೊನೆಯ ತನಕವೂ ಕಾಡುವಂತೆ ಮಾಡುವ ಕತೆ ಇದರಲ್ಲಿದೆ. ಚಿತ್ರದಲ್ಲಿ ಇರುವುದು ಹೊಸ ಕಲಾವಿದರಾದರೂ ಪ್ರೇಕ್ಷಕರು ಮೆಚ್ಚುವಂಥ ಅಭಿನಯವನ್ನೇ ನೀಡಿದ್ದಾರೆ. ಅದರಲ್ಲಿಯೂ ಜಯ್ ಪಾತ್ರಧಾರಿ ಜಯಪ್ರಭು ಲಿಂಗಾಯತ್ ತಮ್ಮ ನಟನೆ ಮಾತ್ರವಲ್ಲ ಆಕರ್ಷಕ ಮೈಕಟ್ಟಿನ ಮೂಲಕವೂ ಗಮನ ಸೆಳೆಯುತ್ತಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕರಾಗಿ ಮುಂದುವರಿದರೆ ಅಚ್ಚರಿ ಇಲ್ಲ! ಚಿತ್ರದ ಆರಂಭದಿಂದ ಕೊನೆಯವರೆಗೆ ಕೇಳಿ ಬರುವ ಹೆಸರು ಪೀಹು. ಅಂದಹಾಗೆ ಪೀಹುವಾಗಿ ನಟಿಸಿದ ಟೀನಾ ಪೊನ್ನಪ್ಪ ಕೂಡ ಪಾತ್ರಕ್ಕೆ ನ್ಯಾಯ ನೀಡುವಲ್ಲಿ ಗೆದ್ದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ಉಳಿದಂತೆ ಆಶೀಸ್ ದಾಸ್ ಮತ್ತು ಬಂಗಲೆಯ ಕೆಲಸಗಾರ ಮಂಗಲ್ ಪಾತ್ರಗಳು ಕೂಡ ಕುತೂಹಲ ಮೂಡಿಸುತ್ತವೆ. ಅದರಲ್ಲಿಯೂ ಮಂಗಲ್ ಪಾತ್ರ ಬಳಸಿರುವ ಉತ್ತರ ಕರ್ನಾಟಕದ ಭಾಷೆ, ಅವರ ಅಭಿನಯದ ಶೈಲಿ ಉಲ್ಲೇಖನೀಯ. ಪುಟ್ಟ ದೆವ್ವವಾಗಿ ಕಾಣಿಸಿರುವ ಬಾಲನಟಿಯ ಪಾತ್ರವನ್ನು ಕೂಡ ಮರೆಯುವಂತಿಲ್ಲ.
ಇತ್ತೀಚೆಗೆ ನಾಲ್ಕು ಮಂದಿ ಯುವಕರು ಕಾಡಿಗೆ ಹೋಗುವ ಸಬ್ಜೆಕ್ಟ್ ಇರಿಸಿಕೊಂಡು ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಚಿತ್ರ ಕೂಡ ಅವುಗಳಲ್ಲಿ ಒಂದು ಎನ್ನುವಂತಿದ್ದರೂ ಆರಂಭದಿಂದಲೇ ನಿರೂಪಣೆಯ ಶೈಲಿ ಮತ್ತು ಹೊಸಮುಖದ ಕಲಾವಿದರ ನಟನೆ ಆಕರ್ಷಣೆ ಮೂಡಿಸುತ್ತದೆ. ಚಿತ್ರದ ಆರಂಭದಲ್ಲಿ ನೀಡಿರುವ ಹಿನ್ನೆಲೆ ಸಂಗೀತ, ಶೀರ್ಷಿಕೆ ತೋರಿಸಿರುವಲ್ಲಿನ ಕಲೆ, ಒಂದೆರಡು ಮಾಧುರ್ಯ ಪೂರ್ಣ ಹಾಡುಗಳು ಈ ಚಿತ್ರವನ್ನು ವಿಶೇಷವಾಗಿಸಿವೆ. ಒಟ್ಟಿನಲ್ಲಿ ಕಾಲೇಜ್ ಹುಡುಗರು ಸೇರಿದಂತೆ ಯುವ ಸಮೂಹವನ್ನು ಸೆಳೆಯುವ ಎಲ್ಲ ಅಂಶಗಳನ್ನು ಹೊಂದಿರುವ ಚಿತ್ರ ಇದು ಎನ್ನಬಹುದು.
Be the first to comment