ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾ ದೇವಿ ಅವರು ನಿಧನರಾಗಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಸೋಮವಾರ ಅವರು ಬೆಂಗಳೂರಿನ ಮಲ್ಲೇಶ್ವರಂನ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮುಂಜಾನೆ 8.30ರ ಸುಮಾರಿಗೆ ನಿಧನರಾದರು. ಮೃತರ ಅಂತ್ಯಕ್ರಿಯೆ ಇಂದು ನಡೆಯಲಿದೆ.
ಬೆಳಗ್ಗೆ 11.30 ಕ್ಕೆ ಅಂತ್ಯಕ್ರಿಯೆಗಾಗಿ ಚನ್ನಪಟ್ಟಣದ ಅವರ ಗ್ರಾಮ ದಶಾವರಕ್ಕೆ ಕೊಂಡೊಯ್ಯಲಾಗುವುದು ಎಂದು ಅವರ ಪುತ್ರ ಹರ್ಷ ಗೌತಮ್ ತಿಳಿಸಿದ್ದಾರೆ. ಕುಟುಂಬವು ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಕಾರ್ಯವಿಧಾನ ಪೂರ್ಣಗೊಂಡಿದೆ. ನಟಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು.
ಸರೋಜಾದೇವಿ ಅವರು ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. 1955ರಲ್ಲಿ ಮಹಾಕವಿ ಕಾಳಿದಾಸ ಸಿನಿಮಾದ ಮೂಲಕ ಅವರು ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿದರು. ಆಗ ಅವರಿಗೆ ಕೇವಲ 17 ವರ್ಷವಾಗಿತ್ತು. ಅನಂತರ ಅವರು ಕನ್ನಡ ಅಲ್ಲದೇ ತಮಿಳು, ಹಿಂದಿ, ತೆಲುಗು ಭಾಷೆಯ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸರೋಜಾ ದೇವಿ ಅವರ ಕೊನೆಯ ಸಿನಿಮಾ 2019 ರ ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ವಾಗಿತ್ತು.
ಸರೋಜಾದೇವಿ ಅವರಿಗೆ ಭಾರತ ಸರ್ಕಾರದಿಂದ 2008 ರಲ್ಲಿ ಭಾರತದ 60 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಅವರು ಪದ್ಮಭೂಷಣ (1992) ಮತ್ತು ಪದ್ಮಶ್ರೀ (1969) ಪುರಸ್ಕೃತರಾಗಿದ್ದಾರೆ.
ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, 2009 ರಲ್ಲಿ ಎರಡನೇ ಬಾರಿಗೆ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಸರೋಜಾದೇವಿ ಅವರಿಗೆ ನೀಡಲಾಗಿದೆ. ಸರೋಜಾ ದೇವಿ ಅವರ ಕೊನೆಯ ಪರದೆಯ ಮೇಲೆ ಕಾಣಿಸಿಕೊಂಡಿದ್ದು 2019 ರ ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಕೊನೆಯ ಸಿನಿಮಾವಾಗಿತ್ತು.
ಸರೋಜಾ ದೇವಿ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
‘ಚಲನಚಿತ್ರ ನಟಿ ಬಿ.ಸರೋಜಾ ದೇವಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಆದರ್ಶಪ್ರಾಯ ಐಕಾನ್ ಆಗಿ ಸರೋಜಾ ದೇವಿ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ವೈವಿಧ್ಯಮಯ ಅಭಿನಯ ಅಳಿಸಲಾಗದ ಗುರುತುಗಳನ್ನು ಬಿಟ್ಟಿವೆ. ವಿವಿಧ ಭಾಷೆಗಳನ್ನು ವ್ಯಾಪಿಸಿರುವ ಮತ್ತು ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಕಾರ್ಯ ಅವರ ಬಹುಮುಖ ಸ್ವಭಾವವನ್ನು ಎತ್ತಿ ತೋರಿಸುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರೋಜಾ ದೇವಿ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ಆದ ಬಹುದೊಡ್ಡ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟ ದರ್ಶನ್ ತೂಗುದೀಪ್ ಪೋಸ್ಟ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಸರೋಜಾದೇವಿ ಅವರ ಅಗಲಿಕೆ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಅವರು ಹೇಳಿದ್ದಾರೆ.
_





Be the first to comment