ಚಿತ್ರ: ಸರಳ ಸುಬ್ಬಾರಾವ್
ನಿರ್ದೇಶನ: ಮಂಜು ಸ್ವರಾಜ್
ನಿರ್ಮಾಣ: ಲೋಹಿತ್ ಎಚ್ ನಂಜುಂಡಯ್ಯ
ತಾರಾಗಣ: ಅಜಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು ಮುಂತಾದವರು…
ರೇಟಿಂಗ್: 3.5/5
ಸಾಮಾನ್ಯವಾಗಿ ಇಂದಿನ ಸಿನಿಮಾಗಳನ್ನು ವೀಕ್ಷಿಸುವವರ ಒಂದು ಹೇಳಿಕೆ ಇದೆ. ಎಪ್ಪತ್ತರ ಕಾಲದ ಕನ್ನಡ ಸಿನಿಮಾಗಳೆಲ್ಲ ಎಷ್ಟೊಂದು ಚೆನ್ನಾಗಿದ್ದವು ಎನ್ನುವುದೇ ಆ ಮಾತು. ಅಂಥ ಮಾತು ಆಡುವವರು ಮತ್ತು ಆ ಮಾತನ್ನು ಸಮರ್ಥಿಸುವವರು ಖಂಡಿತವಾಗಿ ನೋಡಲೇಬೇಕಾದ ಚಿತ್ರ ಸರಳ ಸುಬ್ಬಾರಾವ್. ಯಾಕೆಂದರೆ 1971ರ ಕಾಲಘಟ್ಟದಲ್ಲಿ ನಡೆಯುವಂಥ ಘಟನೆಯನ್ನೇ ಆಧಾರವಾಗಿಸಿ ಈ ಚಿತ್ರವನ್ನು ತೆರೆಕಾಣಿಸಲಾಗಿದೆ.
ಮಹಾರಾಜಾ ಕಾಲೇಜಿನ ಸುರಸುಂದರ ಪ್ರೊಫೆಸರ್ ಮತ್ತು ಒಬ್ಬಳು ಅಂದದ ಬರಹಗಾರ್ತಿ ಆಸ್ಪತ್ರೆಯೊಂದರಲ್ಲಿ ಭೇಟಿಯಾಗುತ್ತಾರೆ. ಸಂಬಂಧಿಕರ ಶುಶ್ರೂಷೆಗೆಂದು ಇಬ್ಬರು ಕೂಡ ಸಂಬಂಧ ಬೆಳೆಸುವ ಕನಸು ಕಾಣುತ್ತಾರೆ. ಆತನಿಗೆ ಚೆಲುವಾದ ಅತ್ತೆ ಮಗಳೊಬ್ಬಳಿದ್ದಾಳೆ. ಆವಳ ಹೆಸರುವ ದೇವಯಾನಿ. ಅದೇ ರೀತಿ ಅವಳನ್ನು ವರಿಸಲು ಬಯಸುವ ಸುಂದರವಾದ ಯುವಕ ರಾಜಗೋಪಾಲನಿದ್ದಾನೆ. ಆದರೆ ಇಬ್ಬರ ಆಯ್ಕೆಯೂ ತಾವೇ ಪರಸ್ಪರ ಮದುವೆಯಾಗಬೇಕೆಂದೇ ಆಗಿರುತ್ತದೆ. ಹಾಗೆ ಸರಳಾ ಮತ್ತು ಸುಬ್ಬರಾವ್ ಸತಿ ಪತಿಯರಾಗುತ್ತಾರೆ. ಅಲ್ಲಿಂದ ರೋಮಾಂಚಕಾರಿ ಪ್ರಣಯಕಥೆ ಶುರುವಾಗುತ್ತದೆ.
70ರ ದಶಕದ ದಂಪತಿ ಹೇಗೆಲ್ಲ. ಪ್ರೀತಿಸಬಹುದೋ ಹಾಗೆಲ್ಲ ಪ್ರೀತಿಸುತ್ತಾರೆ ಈ ಜೋಡಿ. ಅವಳದು ತೀರ ಮಕ್ಕಳ ಸ್ವಭಾವ. ತಿಂಡಿಪೋತಿ ಬೇರೆ. ಇಂಥ ಸಂದರ್ಭದಲ್ಲೇ ತಾಯಿಯಾಗುವ ಲಕ್ಷಣಗಳು ಕಾಣಿಸುತ್ತವೆ. ಮುಂದೇನಾಯಿತು ಎನ್ನುವುದನ್ನೆಲ್ಲ ಚಿತ್ರಮಂದಿರದಲ್ಲಿ ನೋಡುವ ಅವಕಾಶ ಕಳೆದುಕೊಳ್ಳಬಾರದು.
ಅಜಯ್ ರಾವ್ ಅವರು ಇತ್ತೀಚೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಎಪ್ಪತ್ತರ ದಶಕದ ಯುವಕನಾಗಿ ಮನಸೆಳೆಯುವ ನಟನೆ ನೀಡಿದ್ದಾರೆ. ಸರಳ ಪಾತ್ರದಲ್ಲಿ ಮಿಶಾ ನಾರಂಗ್ ಭಾವಪೂರ್ಣ ಅಭಿನಯ ನೀಡಿದ್ದಾರೆ. ಅಜಯ್ ನಟಿಸಿದ ಸುಬ್ಬಾರಾವ್ ಪಾತ್ರದ ತಾಯಿಯಾಗಿ ಚಿತ್ಕಳಾ ಬಿರಾದಾರ್ ಕಾಣಿಸಿದ್ದಾರೆ.
ಇಲ್ಲಿ ಮತ್ತೊಂದು ವಿವಾಹಿತ ಜೋಡಿಯ ಪ್ರೇಮಕಥೆಯೂ ಇದೆ. ಅದು ಮದುವೆಯಾಗಿ 25 ವರ್ಷಗಳ ಬಳಿಕ ತಂದೆ ತಾಯಿಯಾಗುವ ನರಸಿಂಹ ಶಾಸ್ತ್ರಿ ಮತ್ತು ಲಕ್ಷ್ಮೀ ದಾಂಪತ್ಯದ ಕಥೆ.ರಂಗಾಯಣ ರಘು ಮತ್ತು ವೀಣಾ ಸುಂದರ್ ಈ ಪಾತ್ರಗಳಾಗಿ ಬದುಕಿದ್ದಾರೆ.
ಕಾಲೇಜ್ ನಲ್ಲಿ ಪ್ರೊಫೆಸರ್ ಸುಬ್ಬಾರಾವ್ ಜತೆ ಪ್ರೊಫೆಸರ್ ಆಗಿರುವ ಇತರ ಪಾತ್ರಗಳನ್ನು ವಿಜಯ್ ಚೆಂಡೂರ್, ರಾಮಕೃಷ್ಣ, ರಘು ರಾಮನಕೊಪ್ಪ ಮೊದಲಾದವರು ನಿರ್ವಹಿಸಿದ್ದಾರೆ. ಎಲ್ಲ ಪಾತ್ರಗಳಿಗೂ ಕೂಡ ಎಪ್ಪತ್ತರ ದಶಕದ ಪೋಷಾಕು ನೀಡಿರುವುದು ಆ ಕಾಲವನ್ನು ಕಣ್ಣೆದುರು ತಂದಂತೆ ಮಾಡುತ್ತದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿಯೂ ಎಂಬತ್ತರ ಕಾಲದ ಮಾಧುರ್ಯ ಮೈವತ್ತಹಾಗಿದೆ.
ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಇಂದಿನ ದಾಂಪತ್ಯದ ಕಥೆ ಹೇಳಿದ್ದ ನಿರ್ದೇಶಕ ಮಂಜು ಸ್ವರಾಜ್ ಈ ಬಾರಿ ನಮ್ಮನ್ನೆಲ್ಲ ಎಪ್ಪತ್ತರ ದಶಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.





Be the first to comment