‘ಕಾಂತಾರ’ ಸಿನಿಮಾ ಮೂಲಕ ದೇಶದಾದ್ಯಂತ ಖ್ಯಾತಿ ಗಳಿಸಿದ ನಟಿ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
‘ಜಯಂ’ ಖ್ಯಾತಿಯ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಟ್ರೈಲರ್ ನಿನ್ನೆ ಬಿಡುಗಡೆ ಆಗಿದ್ದು ಸಪ್ತಮಿ ಗೌಡ ಅವರ ಪಾತ್ರ ಹೈಲೆಟ್ ಆಗಿದೆ. ‘ತಮ್ಮುಡು’ ಸಿನಿಮಾದಲ್ಲಿ ಸಪ್ತಮಿ ಗೌಡ ಬುಡಕಟ್ಟು ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ.
ಅಕ್ಕ-ತಮ್ಮನ ನಡುವಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಅಕ್ಕ ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗುವ ತಮ್ಮ. ಅವನಿಗೆ ಜೊತೆಯಾಗಿ ನಿಲ್ಲುವ ಪಾತ್ರಗಳ ಸುತ್ತ ಕತೆ ನಡೆಯುತ್ತದೆ. ಈ ಸಿನಿಮಾನಲ್ಲಿ ಇರುವ ಇಬ್ಬರು ನಾಯಕಿಯರೂ ಕನ್ನಡದವರೇ. ಸಪ್ತಮಿ ಗೌಡ, , ಕೊಡಗಿನ ವರ್ಷಾ ಬೊಲ್ಲಮ್ಮ ಈ ಸಿನಿಮಾಕ್ಕೆ ನಾಯಕಿಯರು. ನಾಯಕನ ಅಕ್ಕನ ಪಾತ್ರದಲ್ಲಿ ಸಾಸ್ವಿಕಾ ನಟಿಸಿದ್ದಾರೆ.
ಸಿದ್ಧಾರ್ಥ್ ನಟನೆಯ ‘ಓ ಮೈ ಫ್ರೆಂಡ್’, ನಾನಿ, ಸಾಯಿ ಪಲ್ಲವಿಯ ‘ಮಿಡಲ್ ಕ್ಲಾಸ್ ಅಬ್ಬಾಯಿ’, ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೇಣು ಶ್ರೀರಾಮ್ ‘ತಮ್ಮುಡು’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ದಿಲ್ ರಾಜು, ಸಿರೀಶ್ ಮತ್ತು ರವಿ ಸುರ್ನಿರೆಡ್ಡಿ ಬಂಡವಾಳ ತೊಡಗಿಸಿದ್ದಾರೆ. ಜುಲೈ 4 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
—-

Be the first to comment