ಚಿತ್ರ: ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ
ನಿರ್ದೇಶನ: ಹೇಮಂತ್ ರಾವ್
ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಆಚಾರ್ ಇತರರು
ರೇಟಿಂಗ್: 4/5
ತಾನು ಪ್ರೀತಿಸಿದ ಹುಡುಗಿ ಬೇರೆಯವರನ್ನು ಮದುವೆಯಾದರೂ, ಅವಳಿಗೆ ಗೊತ್ತಾಗದಂತೆ ಅವಳ ಬದುಕಿಗೆ ಒಳಿತನ್ನು ಬಯಸುವ ಅಮರ ಪ್ರೇಮ ಕಥೆಯಾಗಿ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಭಾಗ ಮೂಡಿ ಬಂದಿದೆ.
ಈ ವಾರ ಬಿಡುಗಡೆ ಆಗಿರುವ ಸಪ್ತಸಾಗರದಾಚೆ ಎರಡನೇ ಭಾಗಕ್ಕೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮೊದಲ ಭಾಗದಲ್ಲಿ ಪರಿಸ್ಥಿತಿಯ ಕಾರಣದಿಂದ ದೂರ ಆಗಿದ್ದ ಪ್ರೇಮಿಗಳು ಎರಡನೇ ಭಾಗದಲ್ಲಿ ಒಂದಾಗಲಿ ಎನ್ನುವ ಹಂಬಲ ಹೊಂದಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಶೇಡ್ ಬದಲಾಗಿದೆ ಎಂದು ಗೊತ್ತಾಗುತ್ತದೆ. ಮನು ಮತ್ತು ಪ್ರಿಯಾ ದೂರ ಇದ್ದರೂ ಅವರ ಪ್ರೀತಿಯ ತೀವ್ರತೆ ಕಡಿಮೆ ಆಗದಂತೆ ನಿರ್ದೇಶಕರು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದೂರ ಇದ್ದುಕೊಂಡು ಪ್ರೇಯಸಿಗಾಗಿ ಹಂಬಲಿಸುವ ಮಾಜಿ ಪ್ರೇಮಿಯಾಗಿ ರಕ್ಷಿತ್ ಶೆಟ್ಟಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಕಥಾನಾಯಕ ಪ್ರೇಕ್ಷಕರನ್ನು ಬೇರೆಡೆಗೆ ಕರೆದುಕೊಂಡು ಹೋಗುತ್ತಾನೆ. ನಿರ್ದೇಶಕರು ಹಲವು ವಿಚಾರವನ್ನು ಸೂಕ್ಷ್ಮವಾಗಿ ಇಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಎರಡನೇ ಭಾಗದಲ್ಲಿ ಬೇರೆಯದೇ ಆದ ರಕ್ಷಿತ್ ಶೆಟ್ಟಿ ಕಾಣಲು ಸಿಗುತ್ತಾರೆ. ಪ್ರೇಕ್ಷಕರು ನಿರೀಕ್ಷಿಸದೆ ಇರುವ ರೀತಿಯಲ್ಲಿ ಚಿತ್ರದ ಕಥೆ ಸಾಗುತ್ತದೆ.
ಚಿತ್ರದ ಕ್ಲೈಮಾಕ್ಸ್ ಅಪೂರ್ಣ ಎನಿಸುತ್ತದೆ. ಮುಂದೆ ಏನು ಆಗಿರಬಹುದು ಎನ್ನುವುದನ್ನು ಪ್ರೇಕ್ಷಕರೇ ಊಹಿಸಿಕೊಳ್ಳುವ ರೀತಿಯಲ್ಲಿ ಮನು – ಪ್ರಿಯಾ ಪ್ರೇಮಕಥೆ ಕಡಲಿನಲ್ಲಿ ವಿಲೀನವಾಗಿ ಹೋಗುತ್ತದೆ.
ಹೆಚ್ಚು ಸಂಭಾಷಣೆಗಳು ಇಲ್ಲದೆ ಇದ್ದರೂ ರುಕ್ಮಿಣಿ ವಸಂತ್ ಉತ್ಕೃಷ್ಟವಾಗಿ ನಟಿಸಿದ್ದಾರೆ. ವಿಲನ್ ಆಗಿ ರಮೇಶ್ ಇಂದಿರಾ ತಮ್ಮ ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ. ರಕ್ಷಿತ್ ಶೆಟ್ಟಿ ಮನು ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದರೆ, ಚೈತ್ರ ಆಚಾರ್ ಅದಕ್ಕೆ ಜೊತೆ ನೀಡಿದ್ದಾರೆ.
ಹಿನ್ನೆಲೆ ಸಂಗೀತದ ಮೂಲಕ ಚರಣ್ ರಾಜ್ ಅವರು ಸಿನಿಮಾಕ್ಕೆ ಹೊಸ ಆಯಾಮವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಗಮನ ಸೆಳೆಯುತ್ತದೆ.
ಇದುವರೆಗೆ ಪ್ರೇಕ್ಷಕರು ನೋಡಿರಬಹುದಾದ ಸಾವಿರಾರು ಸಿನಿಮಾಗಳ ಪ್ರೇಮಕಥೆಗಿಂತ ಸಪ್ತ ಸಾಗರದ ಕಥೆ ಭಿನ್ನವಾಗಿ ಅವರನ್ನು ಕಾಡುತ್ತದೆ ಎನ್ನುವುದು ಸತ್ಯವಾದ ಮಾತು.
___
Post Views:
161
Be the first to comment