ನಟಿ ಸಾನ್ಯಾ ಅಯ್ಯರ್ ಗೆ ಅನ್ಯಾಯ ಆಗಿದ್ದರೆ ಪೊಲೀಸ್ ದೂರು ನೀಡಲಿ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.
ನಟಿ ಸಾನ್ಯಾ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಹಿಂದಿರುಗಿದ್ದಾರೆ. ಆದರೆ ಆಕೆ ಮತ್ತೆ ಕಂಬಳ ಗದ್ದೆಗೆ ಬಂದ ವಿಚಾರ ಸಮಿತಿಯ ಗಮನಕ್ಕೆ ಬಂದಿಲ್ಲ. ಯಾರೋ ಅವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಕಂಬಳ ಸಮಿತಿಯನ್ನು ಗುರಿ ಮಾಡೋದು ತಪ್ಪು ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಸಾನ್ಯಾ ಪೋಲೀಸ್ ದೂರು ನೀಡಲಿ. ಅವರಿಗೆ ಬೇಕಾದ ಎಲ್ಲಾ ಸಹಾಯ ನಾವು ಮಾಡುತ್ತೇವೆ. ಇದೇ ಘಟನೆಯನ್ನು ಮುಂದಿಟ್ಟು ಕಂಬಳ ಸಮಿತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಕೆಲವು ಶಕ್ತಿಗಳು ಕೆಲಸ ಮಾಡುತ್ತಿದೆ. ಹಿಂದೂ,ಮುಸ್ಲಿಂ ರೂಪವನ್ನೂ ನೀಡಲಾಗುತ್ತಿದೆ. ಹೀಗೆ ಅಪಪ್ರಚಾರ ಮಾಡುವವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಶಕುಂತಲಾ ಶೆಟ್ಟಿ ಹೇಳಿದ್ದಾರೆ.
ಸಾನ್ಯಾ ಐಯ್ಯರ್ ಇತ್ತೀಚೆಗೆ ಪುತ್ತೂರಿನ ಕಂಬಳ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾನ್ಯಾ ಐಯ್ಯರ್ ಭಾಷಣ ಮಾಡುವಾಗ ಯುವಕನೋರ್ವ ಕುಡಿದು ಕೆಟ್ಟದಾಗಿ ವರ್ತಿಸಿದ್ದ, ‘ಸಾನ್ಯಾ ಐ ಲವ್ ಯೂ’ ಎಂದು ಕಿರುಚಾಡುತ್ತಾ ಸಭೆಯಲ್ಲಿ ಮುಜುಗರ ಉಂಟು ಮಾಡಿದ್ದ. ಹಾಗಿದ್ದರೂ ನಟಿ ಸಾನ್ಯಾ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕಂಬಳ, ತುಳುನಾಡಿನ ಬಗ್ಗೆ, ತುಳು ಭಾಷೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಕಂಬಳ ನೋಡಲು ಗೆಳತಿಯೊಟ್ಟಿಗೆ ಸಾನ್ಯಾ ಮರಳಿದಾಗ ಸಾನ್ಯಾರನ್ನು ಮತ್ತೆ ಪೀಡಿಸಿದ ಯುವಕ ನಟಿಯ ಕೂದಲು ಹಿಡಿದು ಎಳೆದಿದ್ದಾನೆ, ಸಾನ್ಯಾ ವಿರೋಧ ವ್ಯಕ್ತಪಡಿಸಿದಾಗ, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಅಲ್ಲಿಯೇ ಇದ್ದ ಕೆಲವರು ಯುವಕನನ್ನು ಎಳೆದು ಅವನಿಗೆ ಧರ್ಮದೇಟು ನೀಡಿದ್ದಾರೆ.
ಘಟನೆ ಬಳಿಕ ಸಾನ್ಯಾ ಹಾಗೂ ಆಕೆಯ ಗೆಳೆತಿಯೊಬ್ಬರು ಘಟನೆ ಬಗ್ಗೆ ವೇದಿಕೆ ಮೇಲೆಯೇ ಆಯೋಜಕರ ಜೊತೆ ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾನಿಯಾ ಅಯ್ಯರ್ ಗೆ ಕಿರುಕುಳ ವಿಚಾರವಾಗಿ ಅನಾವಶ್ಯಕವಾಗಿ ಕಂಬಳ ಸಮಿತಿಯನ್ನು ಗುರಿಮಾಡಲಾಗುತ್ತಿದೆ ಎಂದು ಪುತ್ತೂರು ಕಂಬಳ ಸಮಿತಿ ಆರೋಪಿಸಿದ್ದು ಮಹಾಲಿಂಗೇಶ್ವರ ದೇವರ ಮೊರೆ ಹೋಗಿದೆ.
ಪುತ್ತೂರು ಕಂಬಳದಲ್ಲಿ ಚಿತ್ರನಟಿಗೆ ಕಿರುಕುಳ ಆಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿಗೂ ಗಲಾಟೆಗೂ ಸಂಬಂಧವಿಲ್ಲ. ಇದೊಂದು ಉದ್ದೇಶಪೂರ್ವಕ ಮಾಡಿರುವ ಸುದ್ದಿ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.
___
Be the first to comment