ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಹಾಗೂ ರಚಿತರಾಮ್ ನಟಿಸಿರುವ ಸಂಜು ವೆಡ್ಸ್ ಗೀತಾ 2 ಮರು ಬಿಡುಗಡೆಗೆ ಸಿದ್ಧವಾಗಿದೆ.
ಜನವರಿ 17 ರಂದು ಬಿಡುಗಡೆಯಾಗಿ ಚಿತ್ರಮಂದಿರಗಳಿಂದ ಸದ್ದಿಲ್ಲದೆ ಎತ್ತಂಗಡಿ ಆಗಿದ್ದ ಚಿತ್ರ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಮರು ಬಿಡುಗಡೆಗೆ ಸಿದ್ಧವಾಗಿದೆ. ಇದೇ ಕಥೆಯ ಜೀವಾಳ ಆಗಿದೆ. ಶೀಘ್ರದಲ್ಲಿಯೇ ಮರು ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
ಕಾನೂನು ಗೋಜಲಿನಿಂದ ಮೊದಲ ಆವೃತ್ತಿ ಚೆನ್ನಾಗಿ ಮೂಡಿಬರಲಿಲ್ಲ. ನಾನು ಕಲ್ಪಿಸಿಕೊಂಡಂತೆ ಸಿನಿಮಾ ತೋರಿಸಲು ಆಗಿರಲಿಲ್ಲ. ಅಂತಿಮ ಲ್ಯಾಬ್ ಆವೃತ್ತಿಯನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವಾಗ ಅಳವಡಿಸದಂತೆ ನ್ಯಾಯಾಲಯ ತಡೆಯಿತು. ಲಭ್ಯವಿರುವುದನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ತಿಳಿಸಿದ್ದಾರೆ.
ರಾಗಿಣಿ ದ್ವಿವೇದಿ ಅವರ ಕೇವಲ ಒಂದು ಹಾಡನ್ನು ಹೊರತುಪಡಿಸಿ ಅವರ ಪ್ರಮುಖ ದೃಶ್ಯಗಳು ಕಾಣೆಯಾಗಿದ್ದವು. ರಂಗಾಯಣ ರಘು ಮತ್ತು ಸಂಪತ್ ರಾಜ್ ಅವರೊಂದಿಗಿನ ದೃಶ್ಯಗಳಲ್ಲಿ ಯಾವುದೇ ಭಾವನಾತ್ಮಕ ಸಂಪರ್ಕ ಇರಲಿಲ್ಲ. ಈ ಸಂಪರ್ಕವನ್ನು ಈಗ ಮತ್ತೆ ತರುತ್ತಿದ್ದೇನೆ. ಈಗಾಗಲೇ ಬಿಡುಗಡೆಯಾಗಿದ್ದ ಆವೃತ್ತಿಯಲ್ಲಿ ಚಿತ್ರದ ಅವಧಿ 2 ಗಂಟೆ 2 ನಿಮಿಷ ಇತ್ತು. ಈಗ ಅದನ್ನು 2 ಗಂಟೆ 23 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಆ 20 ನಿಮಿಷ ಫಿಲ್ಲರ್ ಅಲ್ಲ. ಅದು ಆತ್ಮ. ಅದು ಇಲ್ಲದೆ ಚಿತ್ರ ನಿರ್ಜೀವವಾಗಿತ್ತು ಎಂದು ನಾಗಶೇಖರ್ ಹೇಳಿದ್ದಾರೆ.
ಛಲವಾದಿ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
—–

Be the first to comment