ಚಿತ್ರ: ಸಂಜು
ನಿರ್ದೇಶನ: ಯತಿರಾಜು
ನಿರ್ಮಾಣ: ಸಂತೋಷ್ ಡಿ ಎಂ
ತಾರಾಗಣ: ಮನ್ವಿತ್, ಸಾತ್ವಿಕ, ಯತಿರಾಜು, ಬಾಲ ರಾಜುವಾಡಿ, ಅಪೂರ್ವ ಇತರರು
ರೇಟಿಂಗ್: 3.5
ತೆರೆಯ ಮೇಲೆ ಈ ವಾರ ಅರಳಿರುವ ಅಪ್ಪಟ ಪರಿಶುದ್ಧ ಪ್ರೇಮ ಕಥೆಯನ್ನು ಹೊಂದಿದ ಚಿತ್ರ ‘ಸಂಜು’.
ಚಿತ್ರದಲ್ಲಿ ನಾಯಕಿ ಇನ್ನು ಜೀವನ ಸಾಕು ಎಂದು ನಿರ್ಧರಿಸಿ ಬಸ್ ಗಾಗಿ ಬಸ್ ನಿಲ್ದಾಣದ ಬಳಿ ಕಾಯುತ್ತಿರುವ ವೇಳೆಗೆ ನಾಯಕ ಬರುತ್ತಾನೆ. ಅಪರಿಚಿತರಾದ ಇಬ್ಬರಿಗೂ ಮೊದಲ ನೋಟದಲ್ಲಿ ಪ್ರೇಮ ಶುರುವಾಗುತ್ತದೆ. ಅವಳು ‘ ನಾನು ವಿಷ ಕುಡಿದಿದ್ದೇನೆ. ನನ್ನನ್ನು ಬದುಕಿಸು’ ಎನ್ನುತ್ತಾಳೆ. ನಾಯಕಿ ವಿಷ ಕುಡಿದದ್ದು ಯಾಕೆ? ಅವಳು ಬದುಕುವಳೇ ಎನ್ನುವುದನ್ನು ತೆರೆಯ ಮೇಲೆ ನೋಡಬೇಕು.
ಚಿತ್ರದಲ್ಲಿ ಸುಂದರ ಪರಿಸರದಲ್ಲಿ ಅಪ್ಪಟ ಪ್ರೀತಿಯ ಕಥೆ ಅರಳಿದೆ. ನಿರ್ದೇಶಕರು ಒಂದೇ ಲೊಕೇಶನ್ ನಲ್ಲಿ ಅರ್ಧ ಸಿನಿಮಾವನ್ನು ಮುಗಿಸಿದ್ದಾರೆ. ಆದರೆ ಎಲ್ಲೂ ಬೋರ್ ಆಗದ ರೀತಿಯಲ್ಲಿ ಕಥೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಕಥೆ ಸಿಂಪಲ್ ಆದರೂ ನಿರೂಪಣಾ ಶೈಲಿ ಭಿನ್ನ ಆಗಿದೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ನಡೆಯುವ ಕತೆಯಲ್ಲಿ ಪ್ರೀತಿಯ ತೊಳಲಾಟ, ಆತಂಕ ಎಲ್ಲವೂ ಹದವಾಗಿ ಬೆರೆತಿದೆ.
ಚಿತ್ರದ ನಾಯಕಿ ಸಾತ್ವಿಕ ಸಿನಿಮಾದ ಹೈಲೈಟ್ ಆಗಿದ್ದಾರೆ. ಮನ್ವಿತ್ ಅಭಿನಯ ಓಕೆ ಅನಿಸುತ್ತದೆ. ಬಾಲ ರಾಜುವಾಡಿ, ಸಂಗೀತ, ಅಪೂರ್ವ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದ್ದು ಪ್ರೇಕ್ಷಕರಿಗೆ ಹಿತ ಅನಿಸುತ್ತದೆ.

Be the first to comment