ಸ್ಯಾಂಡಲ್ವುಡ್ ನಲ್ಲಿ ನಾಯಕಿಯಾಗಿ ಮಿಂಚಲು ಅನನ್ಯಾ ಕಶ್ಯಪ್ ರೆಡಿ ❤❤

ವಿಜಯ್ ಪ್ರಸಾದ್ ನಿರ್ದೇಶನದ ‘ಸಿದ್ಲಿಂಗು’ ಚಿತ್ರದಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಶಶಿಕಲಾ ಪಾತ್ರ ಮತ್ತು ‘ನೀರ್​ದೋಸೆ’ ಸಿನಿಮಾದ ಬಾಲಕಿ ಕುಮುದಾ ಪಾತ್ರವನ್ನು ಪ್ರೇಕ್ಷಕರು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಪಾತ್ರಗಳು ತೆರೆಮೇಲೆ ಕೆಲಹೊತ್ತು ಕಾಣಿಸಿಕೊಂಡರೂ, ಗಮನ ಸೆಳೆದಿದ್ದವು. ಅಷ್ಟಕ್ಕೂ ಆ ಬಗ್ಗೆ ಈಗ ಮಾತನಾಡುವುದಕ್ಕೆ ಕಾರಣ, ಅನನ್ಯಾ ಕಶ್ಯಪ್! ಆ ಎರಡೂ ಪಾತ್ರಗಳಿಗೆ ಜೀವ ತುಂಬಿದ್ದು ಇದೇ ಅನನ್ಯಾ.

ಸದ್ಯ ಪೂರ್ಣಪ್ರಮಾಣದ ಹೀರೋಯಿನ್ ಆದ ಖುಷಿಯಲ್ಲಿದ್ದಾರೆ. ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅವರು ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಇತ್ತೀಚೆಗೆ ಇದೇ ಚಿತ್ರದ ಮುಹೂರ್ತವೂ ನೆರವೇರಿತು. ಇನ್ನೇನು ಶೂಟಿಂಗ್​ನಲ್ಲೂ ಭಾಗವಹಿಸಲು ಸಜ್ಜಾಗುತ್ತಿದ್ದಾರೆ ಅನನ್ಯಾ.

ಅಂದಹಾಗೆ ‘ಮುಂದಿನ ನಿಲ್ದಾಣ’ ಶೀರ್ಷಿಕೆಗೂ ಸಿನಿಮಾಕ್ಕೂ ಸಂಬಂಧ ಏನು? ಅದನ್ನು ಸ್ವತಃ ಅನನ್ಯಾ ಹೇಳಿಕೊಂಡಿದ್ದಾರೆ. ‘ಪ್ರಸ್ತುತ ಯುವಪೀಳಿಗೆಯ ಲವ್​ಸ್ಟೋರಿ ಸಿನಿಮಾದಲ್ಲಿದೆ. ಇಲ್ಲಿ ಪ್ರವೀಣ್, ರಾಧಿಕಾ ಚೇತನ್ ಮತ್ತು ನಾನು ಪ್ರಧಾನ ಪಾತ್ರ ನಿಭಾಯಿಸುತ್ತಿದ್ದೇವೆ. ಮೂರು ಪಾತ್ರಗಳಿದ್ದರೂ, ಒಬ್ಬೊಬ್ಬರದ್ದು ಒಂದೊಂದು ರೀತಿಯ ಮನಸ್ಥಿತಿ. ಎಲ್ಲರದ್ದೂ ಭಿನ್ನ ಲೈಫ್​ಸ್ಟೈಲ್. ಆ ಮೂವರಲ್ಲಿ ನನ್ನದು ಈಗಿನ ಪೀಳಿಗೆಯ ಹುಡುಗಿ ಪಾತ್ರ. ತುಂಬ ಬೋಲ್ಡ್ ಮತ್ತು ನೇರವಾಗಿ ಮಾತನಾಡುವ ಯುವತಿ’ ಎಂದು ಪಾತ್ರ ಮತ್ತು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ. ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ರಾಧಿಕಾ ಚೇತನ್ ಪೇಂಟರ್ ಆಗಿ ಕಾಣಿಸಿಕೊಂಡರೆ, ಪ್ರವೀಣ್ ಪಾತ್ರಕ್ಕೂ ಮೂರು ಭಿನ್ನ ಶೇಡ್​ಗಳಿವೆಯಂತೆ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್ ಕೆಲಸಗಳ ಜತೆಗೆ ಮುಹೂರ್ತ ಮುಗಿಸಿಕೊಂಡ ಚಿತ್ರತಂಡ, ಶೂಟಿಂಗ್​ಗೆ ತಯಾರಿ ಮಾಡಿಕೊಳ್ಳುತ್ತಿದೆ. ಡಿಸೆಂಬರ್ ಎರಡನೇ ವಾರ ಬೆಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರಂತೆ ನಿರ್ದೇಶಕ ವಿನಯ್ ಭಾರದ್ವಾಜ್. ವಿಶೇಷ ಎಂಬಂತೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಸಂಸ್ಥೆ, ‘ಮುಂದಿನ ನಿಲ್ದಾಣ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಡಲಿದೆ. ಕಲರಿಂಗ್, ಸೌಂಡಿಂಗ್, ಗ್ರೇಡಿಂಗ್ ಅಲ್ಲಿಯೇ ಆಗಲಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಒಂದೊಂದು ಹಾಡಿಗೆ ಒಬ್ಬೊಬ್ಬ ಸಂಗೀತ ನಿರ್ದೇಶಕ ರಾಗ ಸಂಯೋಜನೆ ಮಾಡಿಕೊಡುತ್ತಿದ್ದಾರೆ.

ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ D/O ಪಾರ್ವತಮ್ಮ’ ಸಿನಿಮಾದಲ್ಲಿ ಅಭಿನಯಿಸಿರುವ ಅನನ್ಯಾಗೂ ಪ್ರಮುಖ ಪಾತ್ರವಿದೆ. ‘ಈ ಚಿತ್ರದಲ್ಲಿ ಎರಡು ಕಥೆಗಳು ಸಾಗುತ್ತವೆ. ಒಂದರಲ್ಲಿ ಹರಿಪ್ರಿಯಾ ಪ್ರಧಾನ ಪಾತ್ರವಹಿಸಿದ್ದರೆ, ಇನ್ನೊಂದು ಕಥೆಯಲ್ಲಿ ಅನನ್ಯಾ ಇದ್ದಾರೆ. ಪಾರ್ವತಮ್ಮನ ಮಗಳಾಗಿ, ಪೊಲೀಸ್ ಅಧಿಕಾರಿ ಹರಿಪ್ರಿಯಾ ನಟಿಸಿದ್ದರೆ, ಅನನ್ಯಾ ವೈದ್ಯೆಯಾಗಿದ್ದಾರೆ. ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಥಿತಿಯುಳ್ಳ, ಇನ್ನೊಬ್ಬರ ಕಷ್ಟಗಳಿಗೆ ಬೇಗನೇ ಸ್ಪಂದಿಸುವ ಗುಣವುಳ್ಳ ಪಾತ್ರದಲ್ಲಿ ಅನನ್ಯ ಕಾಣಿಸಿಕೊಂಡಿದ್ದಾರೆ. ತುಂಬ ಶೇಡ್​ಗಳಿರುವಂತಹ ಪಾತ್ರ.

ಇದಕ್ಕೂ ಮೊದಲು ‘ನೀರು ತಂದವರು’ ಕಲಾತ್ಮಕ ಚಿತ್ರದಲ್ಲೂ ಅನನ್ಯಾ ಬಣ್ಣ ಹಚ್ಚಿದ್ದರು. ಅದು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಆದರೆ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಚೊಚ್ಚಲ ಕಮರ್ಷಿಯಲ್ ಚಿತ್ರ D/O ಪಾರ್ವತಮ್ಮ’ ಎಂಬ ಖುಷಿ ಅನನ್ಯಾ ಅವರದ್ದು.

ಅಂದಹಾಗೆ, ಅನನ್ಯಾ ಮೂಲತಃ ರಂಗಭೂಮಿ ಪ್ರತಿಭೆ. ಮೈಸೂರಿನಲ್ಲಿರುವ ಮಂಡ್ಯ ರಮೇಶ್ ಅವರ ನಟನಾ ಶಾಲೆಯಲ್ಲಿ 12 ವರ್ಷಗಳಿಂದ ಸಕ್ರಿಯರಾಗಿದ್ದರು. ‘ನಮ್ಮ ನಟನಾ ಸಂಸ್ಥೆಗೆ ಒಮ್ಮೆ ನಿರ್ದೇಶಕ ವಿಜಯ್ ಪ್ರಸಾದ್ ಬಂದಿದ್ದರು. ಆಗ ಅವರು ನನಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದರು. ಅದಕ್ಕೂ ಮೊದಲು ನಾನು ‘ವೀರಬಾಹು’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದೆ’ ಎಂದು ಹೇಳಿಕೊಳ್ಳುತ್ತಾರೆ ಅವರು. ಸದ್ಯ ನಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅನನ್ಯಾ ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ್ದಾರೆ.

‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಸ್ನೇಹ, ಸಂಬಂಧ, ವೃತ್ತಿ ಜೀವನ ಮತ್ತು ಆಧುನಿಕ ಜೀವನದ ಕುರಿತ ಅಂಶಗಳು ಹೆಚ್ಚಿವೆ. ಮೂರೇ ಪಾತ್ರಗಳ ಮೇಲೆ ಇಡೀ ಸಿನಿಮಾ ಸಾಗುವುದರಿಂದ ಪೂರಕ ತಯಾರಿ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಕಾರ್ಯಾಗಾರಗಳೂ ಶುರುವಾಗಿವೆ ಎಂದು ಹೇಳುತ್ತಾರೆ ನಟಿ ಅನನ್ಯಾ ಕಶ್ಯಪ್.

ನಮ್ಮ ಸ್ಯಾಂಡಲ್ವುಡ್ ಗೆ ಸುಂದರವಾದ ಮತ್ತು ಪ್ರತಿಭಾವಂತ ನಾಯಕಿಯ ಪದಾರ್ಪಣೆ ಆಗುತ್ತಿದೆ. ನಟಿ ಅನನ್ಯಾ ಕಶ್ಯಪ್ ಸ್ಯಾಂಡಲ್ವುಡ್ ನಲ್ಲಿ ಹೆಚ್ಚೆಚ್ಚು ಸಿನಿಮಾ ಮಾಡಿ ಹೆಸರು ಕೀರ್ತಿ ಗಳಿಸುವಂತಾಗಲಿ ಅವರ ಚಿತ್ರಗಳಿಗೆ ಯಶಸ್ಸು ಸಿಗುವಂತಾಗಲಿ ಎಂದು ಸಿನಿಮಾಸ್ಫೂರ್ತಿ ತಂಡದ ಪರವಾಗಿ ಶುಭ ಹಾರೈಸುತ್ತೇವೆ.

This Article Has 1 Comment
  1. Pingback: codeless selenium testing

Leave a Reply

Your email address will not be published. Required fields are marked *

Translate »
error: Content is protected !!