ಸಂಯುಕ್ತಾ ಹೊರನಾಡು ಸಾರಥ್ಯದ ಪ್ರಾಣ ಅನಿಮಲ್ ಫೌಂಡೇಶನ್ ಬೆಂಗಳೂರಿನಲ್ಲಿ ಪ್ರಾಣಿಗಳ ಆಂಬುಲೆನ್ಸ್ ಮತ್ತು ಪ್ರಾಣಿಗಳ ರಕ್ಷಣೆಗೆ 24 ಗಂಟೆಗಳ ಹೆಲ್ಪ್‌ಲೈನ್ ಸೇವೆ ಅರಂಭಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ಬೆಳವಾಡಿ, ‘ಹಳ್ಳಿಗಳಲ್ಲಿ ನಾಯಿಗಳು ಆರೋಗ್ಯವಾಗಿರುತ್ತವೆ. ಆದರೆ ನಗರಗಳಲ್ಲಿ ನಾಗರಿಕತೆಯಿಂದಾಗಿ ಸಮಸ್ಯೆ ಆಗುತ್ತಿದೆ. ಮೊದಲೆಲ್ಲಾ ಪ್ರಾಣಿ, ಪಕ್ಷಿ ಪ್ರಕೃತಿ ನಮ್ಮ ಬದುಕಾಗಿತ್ತು. ಈಗ ವಾಯುಮಾಲಿನ್ಯದಿಂದ ಪ್ರಾಣಿಗಳು ಸಾಯುತ್ತಿವೆ. ಅವುಗಳನ್ನು ನಾವೇ ಇಂಜೆಕ್ಷನ್ ಕೊಟ್ಟು ಕೊಲ್ಲುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಣ ಅನಿಮಲ್ ಫೌಂಡೇಷನ್ ಸ್ಥಾಪಕಿ, ನಟಿ ಸಂಯುಕ್ತಾ ಹೊರನಾಡು ಮಾತನಾಡಿ, ‘ಅಜ್ಜಿ ಭಾರ್ಗವಿ ನಾರಾಯಣ್ ತೀರಿಕೊಂಡಿದ್ದು ಫೆ.14ರಂದು. ಅಜ್ಜಿಯ ನೆನಪಿನಲ್ಲಿ ಈ ರೀತಿ ಪ್ರೇಮಿಗಳ ದಿನ ಆಚರಿಸಲು ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಾಣಿಗಳು ವಿನಾಕಾರಣ ಪ್ರೀತಿ ಕೊಡುತ್ತವೆ. ಅವುಗಳ ನೋವನ್ನು ಕಡಿಮೆ ಮಾಡುವುದರ ಕಡೆಗೆ ಪ್ರಾಣ ಫೌಂಡೇಶನ್ ಕೆಲಸ ಮಾಡಲಿದೆ ಎಂದರು
ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಣ ಆಯಂಬುಲೆನ್ಸ್ ಕೆಲಸ ಮಾಡುತ್ತದೆ. ಅದರೊಂದಿಗೆ ಪ್ರಾಣಿಗಳ ನೆರವಿಗೆ ಹೆಲ್ಪ್‌ಲೈನ್ ಸ್ಥಾಪಿಸಿದ್ದೇವೆ. ಮುಂದೆ ನಮ್ಮ ಕನಸು ವಿಸ್ತರಿಸುವ ಹಂಬಲ ಇದೆ. ಪ್ರಾಣ ಫೌಂಡೇಶನ್ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳಿದರು.
ಆಂಬುಲೆನ್ಸ್ ಮತ್ತು ಪ್ರಾಣಿಗಳ ರಕ್ಷಣೆಗೆ ಹೆಲ್ಪ್‌ಲೈನ್ ಸೇವೆಯನ್ನು ನಟ ಪ್ರಕಾಶ್ ರೈ ಉದ್ಘಾಟಿಸಿದರು. ಪ್ರಕಾಶ್ ಬೆಳವಾಡಿ, ಸುಧಾ ನಾರಾಯಣ್, ಅನಿರುದ್ಧ, ಸುಧಾ ಬೆಳವಾಡಿ ಇದ್ದರು.
Be the first to comment