ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಗ್ನಿ ಶ್ರೀಧರ್ ನಟನೆ
“ಕಿರಿಕ್ ಪಾರ್ಟಿ” ಚಿತ್ರದ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಿರುವ “ಕ್ರೀಂ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರ ಮಾರ್ಚ್ ಒಂದರಂದು ಬಿಡುಗಡೆಯಾಗಲಿದೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಅವರಿಂದ ಈ ಚಿತ್ರದ ಟ್ರೇಲರ್ ಅನಾವರಣವಾಯಿತು.
ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ. ಈ ಚಿತ್ರದ ಪ್ರಮುಖಪಾತ್ರದಲ್ಲೂ ಅಗ್ನಿ ಶ್ರೀಧರ್ ನಟಿಸಿಸಿದ್ದಾರೆ.
ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಟನೆಯಲ್ಲಿ ನನಗೆ ಆಸಕ್ತಿ ಇರಲಿಲ್ಲ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ನಿರ್ಮಾಪಕ ದೇವೇಂದ್ರ ಅವರು ನನ್ನನ್ನು ಈ ಪಾತ್ರ ನಿರ್ವಹಣೆ ಮಾಡಲು ಹೆಚ್ಚು ಒತ್ತಾಯಿಸಿದರು. ನಾನು ಆಗಲ್ಲ ಎಂದು ಹೇಳಿದೆ. ನಿರ್ಮಾಪಕರು ಹಾಗೂ ನನ್ನ ಹತ್ತಿರದವರ ಒತ್ತಾಯಕ್ಕೆ ನಾನು ನಟಿಸಲು ಒಪ್ಪಿಕೊಂಡೆ. ಈ ವಿಷಯವನ್ನು ಚಿತ್ರ ಬಿಡುಗಡೆಯಾಗುವವರೆಗೂ ಗೌಪ್ಯವಾಗಿಡೋಣ ಅಂತ ಹೇಳಿದ್ದೆ. ಆದರೆ ನಿರ್ಮಾಪಕರು ಟ್ರೇಲರ್ ನಲ್ಲೇ ನನ್ನನ್ನು ತೋರಿಸಿಬಿಟ್ಟಿದ್ದಾರೆ. ಇನ್ನು “ಕ್ರೀಂ” ಎಂದರೆ ಬೀಜಾಕ್ಷರ ಮಂತ್ರ. ಈ ಚಿತ್ರದ ಕಥೆ ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿಯನ್ನು ಕುರಿತಾದ ಕಥಾಹಂದರ ಹೊಂದಿದೆ. ಈಗಲೂ ಕೂಡ ನಮ್ಮ ಊರು, ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ಕೃತ್ಯ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅಭಿಷೇಕ್ ಬಸಂತ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಸಂಯುಕ್ತ ಹೆಗಡೆ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು.
ನಾನು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ. ಹಾಗಾಗಿ ಎಲ್ಲಾ ಕಲಾವಿದರ ಸಹಕಾರದಿಂದ ಚಿತ್ರೀಕರಣ ನಿಗದಿಯಂತೆ ಮುಕ್ತಾಯವಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನನ್ನ ಮೊದಲ ನಿರ್ದೇಶನ ಮಾಡಬೇಕೆಂಬ ಆಸೆಯಿತ್ತು. ಅಗ್ನಿ ಶ್ರೀಧರ್ ಅವರ ಈ ಕಥೆ ಬಹಳ ಇಷ್ಟವಾಯಿತು. ನನ್ನ ಮೊದಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.
ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ನಾನು ಈವರೆಗೂ ಮಾಡಿರದ ಪಾತ್ರವಿದು. ಆಕ್ಷನ್ ಕೂಡ ಮಾಡಿದ್ದೇನೆ ಎಂದು ಸಂಯುಕ್ತ ಹೆಗಡೆ ತಿಳಿಸಿದರು.
ನಮ್ಮ ಚಿತ್ರದಲ್ಲಿ ನಟಿಸಬೇಕಿದ್ದ ಖಳನಟರೊಬ್ಬರು ಕಾರಣಾಂತರದಿಂದ ನಟಿಸಲು ಆಗಲ್ಲ ಎಂದಾಗ ನಾನು ಹಾಗೂ ನಿರ್ದೇಶಕರು ಬಹಳ ಒತ್ತಡದಲ್ಲಿದ್ದೆವು. ಆಗ ನನಗೆ ಈ ಪಾತ್ರವನ್ನು ಅಗ್ನಿ ಶ್ರೀಧರ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅನಿಸಿತು. ಅವರ ಬಳಿ ನೀವೇ ಈ ಪಾತ್ರ ಮಾಡಬೇಕು ಎಂದು ಹೇಳಿದಾಗ ಅವರು ಒಪ್ಪಲಿಲ್ಲ. ನಂತರ ಬಹಳ ಕಷ್ಟಪಟ್ಟು ಅವರನ್ನು ಒಪ್ಪಿಸಿದ್ದೆವು. ಚಿತ್ರತಂಡದ ಸಹಕಾರದಿಂದ “ಕ್ರೀಂ” ಚಿತ್ರ ಚೆನ್ನಾಗಿ ಬಂದಿದೆ. ಇದೇ ಮಾರ್ಚ್ ಒಂದರಂದು ಬಿಡುಗಡೆಯಾಗುತ್ತಿದೆ ಎಂದರು ನಿರ್ಮಾಪಕ ದೇವೇಂದ್ರ.
Be the first to comment