ಯುವ ಪ್ರತಿಭೆಗಳ ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಜೂನ್ 21ರಂದು ಬಿಡುಗಡೆಯಾಗಲಿದೆ.
ಜಯ್ ಶೆಟ್ಟಿ-ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜಲಕ್ಷ್ಮಿ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ಶ್ರೀಮತಿ ಪ್ರತಿಭಾ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಆಧುನಿಕತೆಯ ಭರಾಟೆಯಲ್ಲಿ ಹಳ್ಳಿಗಳಲ್ಲಿ ಇದ್ದ ವೈಭವ ಕಡಿಮೆಯಾಗುತ್ತಿದೆ. ಹಳ್ಳಿಯ ಹುಡುಗರು ಶಿಕ್ಷಣ ಪಡೆದ ಬಳಿಕ ಪಟ್ಟಣ ಸೇರುತ್ತಿದ್ದಾರೆ. ಹೀಗೆ ಆದರೆ, ಹಳ್ಳಿಗಳ ಕಥೆ ಏನಾಗುತ್ತೆ? ಅನ್ನುವ ಗಂಭೀರ ಸಮಸ್ಯೆಯನ್ನು ಇಟ್ಟುಕೊಂಡು ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಮಾಡಲಾಗಿದೆ.
“ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಸಿನಿಮಾದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ವೈರಲ್ ಆಗಿದ್ದು, ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡುತ್ತಿದ್ದೇವೆ.” ಎಂದು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.
“ಈ ಹಿಂದೆ 1975 ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್” ಎಂದು ನಾಯಕ ಜಯ್‌ಶೆಟ್ಟಿ ಹೇಳಿದ್ದಾರೆ.
ನಾಯಕಿ ನಿಶಾ ರಜಪೂತ್ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ತಂಗಯಾಗಿ ಮಧುರಾಗೌಡ ನಟಿಸಿದ್ದಾರೆ.
Be the first to comment