ಸ್ಟಾರ್ ದಂಪತಿಗಳಾದ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಅಧಿಕೃತವಾಗಿ ವೈವಾಹಿಕ ಸಂಬಂಧಕ್ಕೆ ತಿಲಾಂಜಲಿ ಹಾಡಿದ್ದಾರೆ.
ತೆಲುಗಿನ ಸ್ಟಾರ್ ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅಕ್ಟೋಬರ್ 2ರಂದು ಈ ದಂಪತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವಿಚ್ಛೇದನದ ಸುದ್ದಿಯನ್ನು ಪ್ರಕಟ ಮಾಡಿದ್ದಾರೆ.
” ಹಲವು ಬಾರಿ ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ.
ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಲು ಅಭಿಮಾನಿಗಳು, ಮಾಧ್ಯಮ, ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತೇವೆ” ಎಂದು ಇವರಿಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು 2017ರ ಅಕ್ಟೋಬರ್ 6ರಂದು ಮದುವೆ ಆಗಿದ್ದರು. ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುನ್ನ ವಿಚ್ಛೇದನ ಪಡೆದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಸಮಂತಾ 50 ಕೋಟಿ ರೂ. ಜೀವನಾಂಶ ಕೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
________
Be the first to comment