ಸಿನಿಮಾ ಮಾಡೋರು ಸಿನಿಮಾ ನೋಡುವುದು ಅಪರೂಪ. ಯಾಕೆಂದರೆ ಸಾಮಾನ್ಯ ಸಿನಿಮಾಗಳು ಅವರಿಗೆ ಬಲುಬೇಗ ಬೋರೆದ್ದು ಬಿಡುತ್ತವೆ. ಅಂಥ ವಿಶೇಷ ಸಿನಿಮಾಗಳಿದ್ದರೆ ಅಪರೂಪಕ್ಕೊಮ್ಮೆ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗುವುದು; ಅಥವಾ ಸೆಲೆಬ್ರಿಟಿ ಶೋಗಳಲ್ಲಿ ಭಾಗಿಯಾಗುವುದು ಮೊದಲಾದವು ನಡೆಯುತ್ತಿರುತ್ತದೆ. ಹಾಗಾಗಿ ಮನೆಯಲ್ಲಿ `ಹೋಮ್ ಥಿಯೇಟರ್’ ವ್ಯವಸ್ಥೆ ಮಾಡಿಕೊಂಡಿದ್ದರೂ ಚಿತ್ರ ನೋಡುವುದು ಅಪರೂಪ. ಅಂಥ ಸಂದರ್ಭದಲ್ಲಿ ಕನ್ನಡದ ಬ್ಯುಸಿ ಸ್ಟಾರ್ ಎಂದು ಹೆಸರಾಗಿರುವ ಶಿವಣ್ಣನಿಗೆ ಒಂದಾದ ಮೇಲೊಂದರಂತೆ ಸಿನಿಮಾ ನೋಡುವ ಅವಕಾಶ ಲಭಿಸಿದೆ. ಅದಕ್ಕೆ ಕೊರೊನಾದ ಎಚ್ಚರಿಕೆಯಿಂದಾಗಿ ನೀಡಲ್ಪಟ್ಟಂಥ ಅಪರೂಪದ ರಜೆಗಳೇ ಕಾರಣ.
ಕಳೆದ ಹತ್ತು ದಿನಗಳಿಂದ ಮನೆಯಲ್ಲೇ ಇರುವ ಶಿವಣ್ಣನಿಗೆ ಮನೆ ಸಾಕು ಅಂತ ಏನೂ ಅನಿಸಿಲ್ಲವಂತೆ. ನಾನು ಸಾಮಾನ್ಯವಾಗಿ ಎಲ್ಲವನ್ನು ಕೂಡ ಎಂಜಾಯ್ ಮಾಡುತ್ತೇನೆ. ಇಷ್ಟು ವರ್ಷಗಳಲ್ಲಿ ಹೀಗೆ ಮನೆಯಲ್ಲಿ ಕುಳಿತುಕೊಂಡಿದ್ದೇ ಇಲ್ಲ. ಹಾಗಾಗಿ ಮನೆಯ ವಾತಾವರಣವನ್ನು ಅನುಭವಿಸುವ ಅವಕಾಶ ಎಂದುಕೊಂಡಿದ್ದೇನೆ. ದಿನಾ ಬೆಳಿಗ್ಗೆ ಆರುವರೆಗೆ ವಾಕ್ ಹೋಗುತ್ತೇನೆ. ಎಳೂವರೆ ಎಂಟು ಗಂಟೆ ಹೊತ್ತಿಗೆ ವಾಪಾಸ್ ಬರುತ್ತೇನೆ. ಆಮೇಲೆ ಸ್ನಾನ, ಮನೇಲೇ ಊಟ ಬಳಿಕ ಪಿಕ್ಚರ್ ನೋಡಿಕೊಂಡು ಇದ್ದೇನೆ. ದಿನವೂ ಒಂದಷ್ಟು ಹೊಸ ಸಿನಿಮಾಗಳನ್ನು ಅಥವಾ ಹಿಂದೆ ನೋಡಿರದೆ ಮಿಸ್ಸಾದಂಥ ಚಿತ್ರಗಳನ್ನು ಹಾಕಿಕೊಂಡು ನೋಡುತ್ತಿದ್ದೇನೆ. ಹಿಂದಿ, ತಮಿಳು, ಇಂಗ್ಲಿಷು ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಕನ್ನಡದಲ್ಲಿ `ಲವ್ ಮಾಕ್ಟೇಲ್’ ನೋಡಿದ್ದೀನಿ. `ದಿಯಾ’ ನೋಡುವ ಪ್ಲ್ಯಾನ್ ಹಾಕಿದ್ದೇನೆ ಎಂದಿದ್ದಾರೆ.
ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದು ಇಷ್ಟು; `ಭಜರಂಗಿ 2′ ತುಂಬ ದೊಡ್ಡ ಮಟ್ಟದಲ್ಲಿ ಮೂಡಿ ಬಂದಿದೆ. ‘ಆರ್.ಡಿ.ಎಕ್ಸ್’ ಸಿನಿಮಾ ಕೂಡ ಇನ್ನೊಂದು ಲೆವೆಲ್ ನಲ್ಲಿದೆ. ನಿರ್ದೇಶಕ ರವಿ ಅರಸು ಈ ಹಿಂದೆ ತಮಿಳಲ್ಲಿ ಮಾಡಿದ್ದ `ಈಟಿ’ ತುಂಬ ಚೆನ್ನಾಗಿ ಮೂಡಿ ಬಂದಿತ್ತು. ತುಂಬ ಬುದ್ಧಿವಂತ. ಎಷ್ಟೊಂದು ಹೋಮ್ ವರ್ಕ್ ಮಾಡುತ್ತಾರೆ ಎಂದರೆ, ಕತೆ ಹೇಳುವ ಕಾಲಘಟ್ಟ ಮತ್ತು ಆನಂತರದ ಘಟನೆಗಳು ಎಲ್ಲದರಲ್ಲಿಯೂ ಒಂದು ಲಿಂಕ್ ಇಟ್ಟುಕೊಂಡು ಅದ್ಭುತವಾದ ಚಿತ್ರ ಮಾಡಿದ್ದಾರೆ. ಯಾವುದೇ ಪಾತ್ರ ಸುಮ್ಸುಮ್ನೇ ಬಂದು ಹೋಗುವುದಿಲ್ಲ. ಲವ್ ಎಪಿಸೋಡ್ ಕೂಡ ಕತೆಯೊಂದಿಗೆ ಕನೆಕ್ಟೆಡ್ ಆಗಿಯೇ ಇರುತ್ತದೆ. ಅದೊಂದು ಇಂಟಲಿಜೆಂಟ್ ಮತ್ತು ಪ್ರಾಮಾಣಿಕವಾಗಿರುವಂಥ ಪ್ರಯತ್ನ. ವ್ಯಕ್ತಿಯ ವಯಸ್ಸಿಗೆ ಸಂಬಂಧಿಸಿದ ಹಾಗೆ ಒಂದೊಳ್ಳೆಯ ಸಂದೇಶ ಕೂಡ ಚಿತ್ರದಲ್ಲಿದೆ. ಅದು ನಮ್ಮ ಕನ್ನಡಕ್ಕಷ್ಟೇ ಸೀಮಿತವಾದ ಸಂದೇಶವಲ್ಲ. ಜಗತ್ತೇ ಒಪ್ಪುವಂಥ ಸಂದೇಶವಾಗಿರುತ್ತದೆ ಎಂದಿದ್ದಾರೆ.
Be the first to comment