ಸಾಧು ಬತ್೯ಡೆಗೆ ‘ಜಾಲಿಲೈಫ್’ ಗಿಫ್ಟ್ !

ಅಮೃತವಾಣಿ, ಪೆರೋಲ್‌ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿದ್ದ ಹಾಗೂ ಪ್ರಸ್ತುತ ತ್ರಿಕೋನ ಎಂಬ ಚಿತ್ರವನ್ನು ನಿರ್ಮಿಸಿರುವ ಬಿ.ಆರ್. ರಾಜಶೇಖರ್ ಈಗ ಹೊಸದೊಂದು ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಅವಕಾಶ ನೀಡಲು ಹೊರಟಿರುವ ಅವರ ಈ ಕೆಲಸಕ್ಕೆ ಸಾಧು ಕೋಕಿಲ ಸಾಥ್ ನೀಡುತ್ತಿದ್ದಾರೆ.

ಕಳೆದ ಬುಧವಾರ ಸಾಧು ಅವರ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ತಮ್ಮ ಫಾರಂ ಹೌಸ್‌ನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದ ನಿರ್ಮಾಪಕರು ಹೊಸ ಚಿತ್ರದ ಅನೌನ್ಸ್ಮೆಂಟ್ ಹಾಗೂ ಸಾಧು ಕೋಕಿಲ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.

ಸಾಧು ಕೋಕಿಲ ಅವರ ನಿರ್ದೇಶನ ಹಾಗೂ ರಾಜಶೇಖರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಹೆಸರು ಜಾಲಿಲೈಫ್. ರಾಜಶೇಖರ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆದು ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

ಈ ಸಂದರ್ಭಲ್ಲಿ ಮಾತನಾಡಿದ ರಾಜಶೇಖರ್ ಹೊಸ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಜಾಲಿಲೈಫ್ ಎಂಬ ಚಿತ್ರವನ್ನು ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರವನ್ನು ಪ್ರಾರಂಭಿಸುವುದಾಗಿ ಹೇಳಿದರು. ಚಿತ್ರದ ಪಾತ್ರಗಳಿಗಾಗಿ ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾದ ಸುಮಾರು 500 ರಿಂದ 600ಜನರನ್ನು ಆಡಿಶನ್ ಮಾಡಿ ಅದರಲ್ಲಿ 18 ಪ್ರತಿಭೆಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಸಿನಿಮಾ ಪ್ರಾರಂಭವಾಗಲು ನನ್ನ ಸ್ನೇಹಿತರಾದ ಸುಚೇಂದ್ರ ಪ್ರಸಾದ್ ಅವರೇ ಕಾರಣ, ಅವರು ಈ ಕಥೆಗೆ 21ರಿಂದ 23ರವರೆಗಿನ ವಯೋಮಿತಿಯ ಮಕ್ಕಳೇ ಬೇಕು, ಇಲ್ಲಿ ಒಂದಷ್ಟು ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳುವುದರಿಂದ ಅವರಿಗೂ ಲೈಫ್ ಕೊಟ್ಟಂತಾಗುತ್ತದೆ ಎಂದು ಸಲಹೆ ಕೊಟ್ಟರು.

ಕಳೆದ 5 ತಿಂಗಳಿಂದ ಹಲವಾರು ತರಬೇತಿ ಸಂಸ್ಥೆಗಳಿಗೆ ಹೋಗಿ ಸುಮಾರು 500ರಿಂದ 600 ಮಕ್ಕಳಿಗೆ ಆಡಿಷನ್ ಮಾಡಿ ಅವರಲ್ಲಿ 17-18 ಜನರನ್ನು ಆಯ್ಕೆ ಮಾಡಿ ಅವರನ್ನು ಪ್ರಿಪೇರ್ ಮಾಡಿದ್ದೇವೆ. ಕಲಾವಿದರ ಆಯ್ಕೆಗಾಗಿ ಸುಚೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಆಡಿಶನ್ ಮಾಡಿದೆವು. ನಂತರ ಸಾಧು ಕೋಕಿಲ ಅವರನ್ನು ಈ ಸಿನಿಮಾ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡಾಗ ಅವರು ಮೊದಲು ಒಪ್ಪಲಿಲ್ಲ.

ಈ ಬಗ್ಗೆ ಬಿಡಿಸಿ ಹೇಳಿದಾಗ ಮೆಚ್ಚಿಕೊಂಡು ಒಪ್ಪಿದರು. ಸದ್ಯ ಇವರೆಲ್ಲರೂ ಸಹಜವಾಗಿ ಮಾತಾಡುವುದನ್ನೇ ಶೂಟ್ ಮಾಡಿಕೊಂಡು ನಂತರ ಅವರು ಯಾವ ಪಾತ್ರಕ್ಕೆ ಸೂಟ್ ಆಗ್ತಾರೆ ಎಂದು ನಿರ್ಧರಿಸುತ್ತೇವೆ. ಏಪ್ರಿಲ್ ಕೊನೆಗೆ ಚಿತ್ರವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ನಿರ್ಮಾಪಕ ರಾಜಶೇಖರ ಹೇಳಿದರು.

ನಂತರ ಸಾಧು ಕೋಕಿಲ ಮಾತನಾಡಿ ನಾವು ಈ ಥರ ಏನೋ ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವುದು ಜನರಿಗೆ ಗೊತ್ತಾಗಲಿ ಎನ್ನುವುದೇ ನಮ್ಮ ಉದ್ದೇಶ.. ಕಾಲೇಜು ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾ ಸಾರಾಂಶ. ಇಲ್ಲಿರುವ ಎಲ್ಲರಿಗೂ ಆಕ್ಟಿಂಗ್ ಮಾಡಿ ಅನುಭವ ಇಲ್ಲ, ರಾಜಶೇಖರ್ 2 ವರ್ಷದಿಂದ ಈ ಕಥೆ ಮಾಡಿದ್ದಾರೆ.

ಇದು ನನ್ನ ನಿರ್ದೇಶನದ 14ನೇ ಸಿನಿಮಾ, ರಾಜಶೇಖರ್‌ ನಿರ್ಮಾಣದ 5ನೇ ಚಿತ್ರ. ನಿರ್ಮಲಾ ಅವರು ಈ ಮಕ್ಕಳನ್ನೆಲ್ಲ ಒಟ್ಟಿಗೇ ಸೇರಿಸಿದ್ದಾರೆ, ಅಲ್ಲದೆ ಇದು ಯೂಥ್ ಸಬ್ಜೆಕ್ಟ್ ಆಗಿರುವುದರಿಂದ ಈ ಚಿತ್ರಕ್ಕೆ ನನ್ನ ಮಗ ಸುರಾಗ್ ಸಂಗೀತ ಮಾಡುತ್ತಿದ್ದಾನೆ ಎಂದು ಪ್ರಕಟಿಸಿದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುಚೇಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಬೇರೆ ಚಿತ್ರೀಕರಣದಲ್ಲಿದ್ದ ಸುಚೇಂದ್ರ ಪ್ರಸಾದ್ ಅವರು ದೂರವಾಣಿ ಮೂಲಕ ಕರೆಮಾಡಿ ಇದೊಂದು ವಿಭಿನ್ನ, ವಿಶೇಷ ಹಾಗೂ ವಿಶಿಷ್ಠ ಪ್ರಯತ್ನವೆನ್ನಬಹದು, ನಾಟಕಶಾಲೆಯ ಮಕ್ಕಳನ್ನು ಕರೆತಂದು ಅವರಿಂದ ಆ್ಯಕ್ಟ್ ಮಾಡಿಸುತ್ತಿದ್ದಾರೆ, ನಿರ್ಮಾಪಕರ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು. ಚಿತ್ರಕಥೆ ರಚಿಸುವಲ್ಲಿ ರಾಜಶೇಖರ್ ಅವರೊಂದಿಗೆ ಭಾಗಿಯಾಗಿದ್ದ ಅರ್ಜುನ್ ಹಾಗೂ‌ ಅಸೋಸಿಯೆಟ್ ಡೈರೆಕ್ಟರ್, ಸಂಭಾಷಣೆಕಾರ ನಿಶ್ಚಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!