“ಸೌತ್ ಇಂಡಿಯನ್ ಹೀರೋ” ಚಿತ್ರದ ಟೀಸರ್ ಬಿಡುಗಡೆ.

ಫಸ್ಟ್ ರ್ಯಾಕ್ ರಾಜು, ರಾಜು ಕನ್ನಡ ಮೀಡಿಯಂನಂಥ ಯಶಸ್ವೀ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ನರೇಶ್‌ಕುಮಾರ್ ಹೆಚ್.ಎನ್. ಹೊಸಳ್ಳಿ ಅವರು ಈಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ ಹೆಸರು ಸೌತ್ ಇಂಡಿಯನ್ ಹೀರೋ. ವಿಶೇಷ ಕಥಾಹಂದರ ಇಟ್ಟುಕೊಂಡು ಈ ಚಿತ್ರವನ್ನು ನಿದೇಶಿಸುವ ಜೊತೆಗೆ ಪತ್ನಿ ಶಿಲ್ಪಾ ಅವರ ಜೊತೆಗೂಡಿ ಬಂಡವಾಳವನ್ನೂ ಸಹ ಹಾಕಿದ್ದಾರೆ. ಈ ಚಿತ್ರದಲ್ಲಿ ಸಾರ್ಥಕ್ ನಾಯಕನಾಗಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಬಾಂಬೆ ಮೂಲದ ಊರ್ವಶಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ನರೇಶ್‌ಕುಮಾರ್ ಇತ್ತೀಚೆಗೆ ಈ ಚಿತ್ರದ ವಿಶೇಷ ಕಾನ್ಸೆಪ್ಟ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನರೇಶ್‌ಕುಮಾರ್, ದಕ್ಷಿಣಭಾರತ ಚಿತ್ರರಂಗದ ಎಲ್ಲಾ ಹೀರೋಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಹೆಣೆದಿರುವ ಕಥೆಯಿದು, ನಾಯಕನ ಪಾತ್ರದಲ್ಲಿ ಈ ಎಲ್ಲಾ ಸ್ಟಾರ್ ಹೀರೋಗಳನ್ನು ಕಾಣಬಹುದಾಗಿದೆ. ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣ್‌ರಾವ್, ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಮೇಲೆ ಏನೆಲ್ಲ ಸಂಕಷ್ಟ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಂಟೆಂಟ್. ನಾಯಕನ ಪಾತ್ರಕ್ಕೆ ಮೂರು ಶೇಡ್‌ಗಳಿವೆ. ಒಂದರಲ್ಲಿ ಹಳ್ಳಿಯ ಬ್ಯಾಕ್‌ಡ್ರಾಪ್ ಇದ್ದರೆ, ಮತ್ತೊಂದು ಸಿಟಿಯ ಹಿನ್ನೆಲೆಯಲ್ಲಿರುತ್ತದೆ. ಇನ್ನೊಂದು ಸ್ಪೆಷಲ್‌ ಗೆಟಪ್ ಕೂಡ ಚಿತ್ರದಲ್ಲಿದೆ. ಹಿರೋಯಿಸಂ ಆಧರಿಸಿ ಫನ್ನಿ ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇಮೇಜ್ ಇಲ್ಲದ ಒಬ್ಬ ನಾಯಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆಂದು ಚಿತ್ರದ ಮೂಲಕ ಹೇಳಿದ್ದೇನೆ. ನವಂಬರ್ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಿದೆ ಎಂದು ಹೇಳಿದರು.

ನಾಯಕನಟ ಸಾರ್ಥಕ್ ಮಾತನಾಡುತ್ತ ಅವನು ಮತ್ತು ಶ್ರಾವಣಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ, ಇದೊಂದು ವಿಭಿನ್ನವಾದ ಪಾತ್ರ, ಪಂಚಿಂಗ್  ಡೈಲಾಗ್‌ಗಳನ್ನು ನಿರ್ದೇಶಕ ನರೇಶ್‌ಕುಮಾರ್ ಅವರು ನನಗೆ ಕೊಟ್ಟಿದ್ದಾರೆ. ಲಾಜಿಕ್ ಲಕ್ಷ್ಮಣ್‌ರಾವ್ ಎಲ್ಲಾ ವಿಷಯಗಳನ್ನು ಲಾಜಿಕ್‌ನಲ್ಲಿ ನೋಡುವಾತ, ಅವನು ಸಿನಿಮಾಗೆ ಬಂದನಂತರ ಮುಂದೇನಾಗುತ್ತದೆ ಎನ್ನುವುದು ಕಥೆಯ ತಿರುಳು ಎಂದರು.
ನಾಯಕಿ ಕಾಶಿಮಾ ಮಾತನಾಡುತ್ತ ಈ ಚಿತ್ರದಲ್ಲಿ ನಾನು ಹಳ್ಳಿಯ ಶಿಕ್ಷಕಿ ಮಾನಸಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡಿದ್ದೇನೆ ಎಂದು ಹೇಳಿದರು. ನಿರ್ಮಾಪಕಿ ಶಿಲ್ಪಾ ಮಾತನಾಡುತ್ತ ಈ ಕಥೆ ಕೇಳಿದಾಗ ತುಂಬಾ ಇಷ್ಟವಾಯಿತು, ನನ್ನ ಫೆಂಡ್ಸ್ ಎಲ್ಲರೂ ಸೇರಿ ಬಂಡವಾಳಹಾಕಿ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ ಎಂದರು. ತನಿಖಾಧಿಕಾರಿಯಾಗಿರುವ ಗುರು, ನಿರ್ದೇಶಕನಾಗಿ ನಟಿಸಿರುವ ವಿಜಯ್ ಚೆಂಡೂರು, ಅಮಿತ್, ಅಶ್ವಿನ್‌ರಾವ್ ಪಲ್ಲಕ್ಕಿ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ
ಹೇಳಿಕೊಂಡರು. ಸಂಗೀತ ನಿರ್ದೇಶಕ ಹರ್ಷವರ್ಧನ್ ಮಾತನಾಡಿ ಚಿತ್ರದಲ್ಲಿ ೫ ಹಾಡುಗಳಿದ್ದು, ತುಂಬಾ ಚೆನ್ನಾಗಿ ಬಂದಿವೆ ಎಂದರು. ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಛಾಯಾಗ್ರಹಣ, ನರೇಶ್‌ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!