ಹೊಸಬರೇ ಕೂಡಿರುವ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದವರೆಗೂ ಬಂದು ನಿಂತಿದೆ. ಈ ಹೊಸಬರ ಚಿತ್ರಕ್ಕೆ ‘ಸಾರೋಟ್’ ಎಂದು ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ‘ನಮ್ದು ಡಿಫರೆಂಟ್ ಲವ್ಸ್ಟೋರಿ’ ಎಂದು ಹೇಳಿಕೊಳ್ಳುವ ಚಿತ್ರತಂಡಗಳ ನಡುವೆ, ‘ಸಾರೋಟ್’ ಬಳಗ ‘ ಅಚ್ಚುಕಟ್ಟಾದ ಒಂದು ಸಿನ್ಮಾ ಮಾಡಿದ್ದೇವೆ ನೋಡಿ, ಹರಸಿ-ಹಾರೈಸಿ’ ಎಂದು ವಿನಮ್ರವಾದ ಮನವಿಯೊಂದನ್ನು ಮುಂದಿಟ್ಟಿದೆ. ಅಲ್ಲಿಗೆ ಇದು ಲವ್ಸ್ಟೋರಿನಾ? ರೌಡಿಸಂ ಸಬ್ಜೆಕ್ಟಾ? ಮಾಸ್-ಕ್ಲಾಸ್..? ಎಂಬೆಲ್ಲಾ ವರ್ಗ ಮಾಡದೇ ಸೀದಾ ಚಿತ್ರಮಂದಿರದಲ್ಲೇ ಸಿನಿಮಾ ನೋಡಬೇಕೆಂಬುದು ಅವರ ಕೋರಿಕೆ.
ಅದಾಗ್ಯೂ ಒಂದು ಸಿನಿಮಾ ಎಂದಮೇಲೆ ಕಥೆಯಾದರೂ ಬೇಕಲ್ಲ..? ಅದರ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಡುತ್ತಾರೆ ಯುವ ನಿರ್ದೇಶಕ ಗೌತಮ್. ‘ಈ ಚಿತ್ರದಲ್ಲಿ ಎಲ್ಲರೂ ಹೊಸಬರೇ ಇರುವುದರಿಂದ ಏನನ್ನಾದರೂ ಹೊಸತನ್ನೇ ಹೇಳಿದರೆ ಚೆನ್ನ ಎಂದುಕೊಂಡು ನವಿರಾದ ಕಥೆಯೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಪ್ರೇಮಕಥೆಯಿದೆ. ಸಂಬಧಗಳ ಮೌಲ್ಯವಿದೆ. ನಗುವಿಗೆ ಬರವಿಲ್ಲ. ಹೊಸ ಹೊಸ ಲೊಕೇಶನ್, ಪಾತ್ರಕ್ಕೆ ತಕ್ಕ ಕಲಾವಿದರು, ಜಬರ್ದಸ್ತ್ ಆಕ್ಷನ್, ಒಳ್ಳೊಳ್ಳೆ ಹಾಡುಗಳು… ಹೀಗೆ ಒಂದು ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳನ್ನಿಟ್ಟುಕೊಂಡು ಚಿತ್ರೀಕರಣ ಪೂರೈಸಿದ್ದೇವೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದೇವೆ. ಆದಷ್ಟೂ ಬೇಗ ಟೀಸರ್ ರಿಲೀಸ್ ಮಾಡುವ ಉದ್ದೇಶವಿದೆ. ನಮ್ಮದೊಂದು ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರ ಬೆಂಬಲ ಅತ್ಯಗತ್ಯ’ ಅಂತಾರೆ ಗೌತಮ್.
ಶ್ರೀಕಿರಣ್ ಎಂಬ ಯುವ ಪ್ರತಿಭೆ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯವಾಗುತ್ತಿದ್ದು, ಅವರಿಗೆ ಜೋಡಿಯಾಗಿ ಮರ್ಲಿನ್ ಇದ್ದಾರೆ. ಉಳಿದ ತಾರಾಬಳಗದಲ್ಲಿ ಮಿಮಿಕ್ರಿ ಗೋಪಿ, ಕುರಿ ಸುನಿಲ್, ಪಲ್ಟಿ ಗೋವಿಂದ್, ನಾಗರತ್ನ ರಂಗಾಯಣ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ಎಂ.ಸಿದ್ದರಾಜು ನಿರ್ಮಾಣದ ಈ ಚಿತ್ರಕ್ಕೆ ವೇಲು ಛಾಯಾಗ್ರಹಣವಿದೆ.
Pingback: ssp3k.bkn.go.id 2022