ಸಂಗೀತ ನಿರ್ದೇಶಕ ಎಸ್ಪಿ ವೆಂಕಟೇಶ್ ನಿಧನ

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್ಪಿ ವೆಂಕಟೇಶ್ ( 71) ಅವರು  ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರ ಅಂತಿಮ ವಿಧಿವಿಧಾನಗಳು ಇಂದು ಚೆನ್ನೈನಲ್ಲಿ ನಡೆಯಲಿವೆ.

ಗಿಟಾರಿಸ್ಟ್ ಆಗಿ ಸಿನಿರಂಗಕ್ಕೆ ಕಾಲಿಟ್ಟ   ವೆಂಕಟೇಶ್, ತಮ್ಮ ಸಂಗೀತ ಪ್ರತಿಭೆಯಿಂದ ದಕ್ಷಿಣ ಭಾರತದ ಬಹುಭಾಷಾ ಚಿತ್ರರಂಗದಲ್ಲಿ ಅಚ್ಚಳಿಯದ ಸ್ಥಾನ ಪಡೆದುಕೊಂಡರು. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ ಸೇರಿದಂತೆ ನೂರಾರು ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದರು.

ಕನ್ನಡ ಚಿತ್ರರಂಗದಲ್ಲಿ ‘ಪ್ರೇಮ ಯುದ್ಧ’,  ‘ಅಶ್ವಮೇಧ’, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’, ‘ಮೇಘ ಮಂದಾರ’ ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದರು.  ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ ಕಲಕಿ’ ಹಾಡು ಜನಪ್ರಿಯ ಆಗಿದೆ.

ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’, ಅನಿಲ್ ಕಪೂರ್  ನಟನೆಯ ‘ವಿರಾಸತ್’ ಹಾಗೂ  ‘ಹಂಗಾಮ’ಗಳಿಗೆ ಎಸ್ಪಿ ವೆಂಕಟೇಶ್ ಸಂಗೀತ ನೀಡಿದ್ದಾರೆ. ಮಲಯಾಳಂ ಮತ್ತು ತಮಿಳಿನ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಿಗೂ ಅವರು ಸಂಗೀತ ನೀಡಿದ್ದರು.

ವೆಂಕಟೇಶ್ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಅನೇಕ ಸಿನಿಮಾ ಗಣ್ಯರು, ಚಿತ್ರರಂಗದ ಗಾಯಕರು, ಸಂಗೀತ ನಿರ್ದೇಶಕರು  ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!