ಖ್ಯಾತ ನಿರ್ದೇಶಕ, ನಟ ಎಸ್. ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಬಹು ಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಮಂಡಳಿ ಸೇರಿದಂತೆ ಸಮುದಾಯದ ಸಂಘಟನೆ ಮಾಡಲಿದ್ದಾರೆ. ಇನ್ನು ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಅವರೆಲ್ಲಾ ಈಗಾಗಲೇ ಅರ್ಜಿ ಹಾಕಿದ್ದಾರೆ. ಅದಕ್ಕೆ ಸಮಯ ನಿಗದಿ ಮಾಡಬೇಕಿದೆ ಎಂದರು.
ಎಸ್ ನಾರಾಯಣ್ ಮಾತನಾಡಿ, ರಾಜಕೀಯ ಪ್ರವೇಶ ಮಾಡಬೇಕು ಎಂದಾಗ ನಾನು ಆಯ್ಕೆಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವನ್ನೂ ಕೊಟ್ಟಿದೆ. ಬಡವನಿಗೆ, ದಲಿತನಿಗೆ, ಹಿಂದುಳಿದವರ ಧ್ವನಿ ಈ ಕಾಂಗ್ರೆಸ್ ಆಗಿದೆ. ಈ ಪಕ್ಷದ ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲರ ಗುರಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಪಕ್ಷಕ್ಕಾಗಿ ದುಡಿಯುತ್ತೇನೆ. ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು.
ನಾರಾಯಣ್ ಅವರು, ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವ ಕುರಿತು ಕಳೆದ ಕೆಲವು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ತಮ್ಮ ‘5ಡಿ’ ಚಿತ್ರದ ಫಸ್ಟ್ ಲುಕ್ ನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಬಿಡುಗಡೆ ಮಾಡಿಸಿದ್ದರು. ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಕುರಿತು ತಿಳಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಎಸ್ ನಾರಾಯಣ್ ಅವರು ತಮ್ಮನ್ನು ಭೇಟಿಯಾಗಿ ಪಕ್ಷ ಸೇರ್ಪಡನೆ ಕುರಿತು ಮಾತನಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಹಂಚಿಕೊಂಡಿದ್ದರು.
ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಎಸ್ ನಾರಾಯಣ್ ಅವರು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು. ನಾರಾಯಣ್ ನಿರ್ದೇಶನದ ಹಲವು ಚಿತ್ರ ಎಚ್ಡಿಕೆ ಅವರ ಚೆನ್ನಾಂಬಿಕಾ ಫಿಲ್ಮ್ಸ್ ಅಡಿ ನಿರ್ಮಾಣಗೊಂಡಿದ್ದವು. ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ನಾರಾಯಣ್ ಅವರು ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಜೀವನ ಆರಂಭಕ್ಕೆ ಮುಂದಾಗಿದ್ದಾರೆ.
___
Be the first to comment