ಎಸ್ ಮಹೇಂದರ್ ನಿರ್ದೇಶನದ ಹೊಸ ಸಿನಿಮಾ ‘ಪಂಪ’

ಕನ್ನಡದಲ್ಲೊಂದು ಸಿನಿಮಾ ತಯಾರಾಗುತ್ತಿದೆ. ನಿಜಕ್ಕೂ ವಿಭಿನ್ನವಾದ ಕಥಾ ಹಂದರ ಮತ್ತು ನಿರೂಪಣೆ ಇದರಲ್ಲಿದೆ. ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ, ಆದಿ ಕವಿ ಪಂಪನ ಮತ್ತೊಂದು ಅವತಾರದಂಥಾ ಕಥಾನಾಯಕ. ಪಂಚಳ್ಳಿ ಪರಶಿವಮೂರ್ತಿ ಎನ್ನುವುದು ಹೆಸರಾದರೂ ಸಣ್ಣದಾಗಿ ಪಂಪ ಅಂತಲೇ ಫೇಮಸ್ಸಾಗಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ.

ಕನ್ನಡ ಭಾಷೆ, ನೆಲ-ಜಲಗಳ ಬಗೆಗೆ ಪ್ರಾಮಾಣಿಕ ಕಾಳಜಿ ಇರಿಸಿಕೊಂಡವರು. ಕಥೆ, ಕಾದಂಬರಿ, ಕಾವ್ಯಗಳನ್ನು ರಚಿಸುತ್ತಾ ವಿವಿಧ ವಯೋಮಾನದ ಓದುಗರ ಎದೆಯಲ್ಲಿ ಜಾಗ ಗಿಟ್ಟಿಸಿಕೊಂಡವರು.ಶತೃಗಳೇ ಇಲ್ಲದಂತೆ ಬದುಕುತ್ತಿದ್ದ ಪಂಪ ಅವರ ಮೇಲೆ ಅದೊಂದು ದಿನ ಅನಾಮಿಕನೊಬ್ಬನಿಂದ ಹತ್ಯಾ ಯತ್ನವಾಗುತ್ತದೆ. ಪ್ರೊಫೆಸರ್ ಪಂಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಪಂಪ ಅವರ ಕೊಲೆಯೂ ಘಟಿಸಿಬಿಡುತ್ತದೆ.

ಯಾರ ಮನಸ್ಸನ್ನೂ ನೋಯಿಸದ, ಯಾರಿಂದಲೂ ದ್ವೇಷಕ್ಕೆ ಒಳಗಾಗದ ಪಂಪರ ಮೇಲೆ ಕೊಲೆ ಮಾಡುವಂತಾ ಸಿಟ್ಟು ಯಾರಿಗಿತ್ತು? ಇವರ ಹತ್ಯೆಯ ಹಿಂದೆ ಯಾವೆಲ್ಲಾ ಹಿತಾಸಕ್ತಿಗಳು ಗುಪ್ತಗಾಮಿನಿಯಂತೆ ಕಾರ್ಯ ನಿರ್ವಹಿಸಿದ್ದವು? ಪರಿಶುದ್ಧ ವ್ಯಕ್ತಿತ್ವದ ಕನ್ನಡಾಭಿಮಾನಿ ಪ್ರೊಫೆಸರ್ ಪಂಪರ ಸುತ್ತ ಏನೆಲ್ಲಾ ಆರೋಪಗಳು ಹುಟ್ಟಿಕೊಳ್ಳುತ್ತವೆ? ಇದರ ಹಿಂದಿನ ರಾಜಕಾರಣವೇನು? ಇವರ ಕೊಲೆಯಿಂದ ಸರ್ಕಾರ ಅಲುಗಾಡುತ್ತದಾ? ಇಂಥಾ ಹತ್ತಾರು ಪ್ರಶ್ನೆಗಳು ಪಂಪನ ಸುತ್ತ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಇದರ ಜೊತೆಗೆ, ಹದಿಹರೆಯದ ಪ್ರೀತಿ-ಪ್ರೇಮ, ಅಪರ ವಯಸ್ಕನೆಡೆಗಿನ ಆರಾಧನಾಭಾವ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ, ಸಮಯಸಾಧಕ ಮತ್ತು ಸ್ವ ಹಿತಾಸಕ್ತ ರಾಜಕಾರಣ – ಈ ಎಲ್ಲವನ್ನೂ ಹಿತಮಿತವಾಗಿ ಒಳಗೊಂಡಿರುವ ಪಕ್ಕಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರಿನ ಚಿತ್ರ ಪಂಪ!

ಕನ್ನಡ ಸಿನಿಮಾ ಸಾಹಿತ್ಯ ಮತ್ತು ಸಂಗೀತ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡಿರುವ ನಾದಬ್ರಹ್ಮ ಹಂಸಲೇಖ ಈ ಚಿತ್ರದ ಮೂಲಕ ಮರು ಪ್ರವೇಶ ಮಾಡುತ್ತಿದ್ದಾರೆ. ಕೌಟುಂಬಿಕ ಮತ್ತು ಮಹಿಳಾ ಪ್ರಧಾನ ಕಥೆಗಳ ಮೂಲಕ ಪ್ರೇಕ್ಷಕರನ್ನು ಸೆಳೆದು, ನಿರ್ದೇಶಕರಾಗಿ ವರ್ಚಸ್ಸು ಪಡೆದಿದ್ದವರು ಎಸ್ ಮಹೇಂದರ್.

ಮಹೇಂದರ್ ಅವರ ಈವರೆಗಿನ ಚಿತ್ರಗಳು ಒಂದು ತೂಕವಾದರೆ ಪಂಪ ಬೇರೆಯದ್ದೇ ಬಗೆಯ ಸಿನಿಮಾವಾಗಿದೆ. ʻʻನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದೇನೆ. ಆದರೆ ಕನ್ನಡ ಮತ್ತು ಕನ್ನಡಿಗನ ಕುರಿತಾದ ಪಂಪ ಸಿನಿಮಾ ನನ್ನ ಪಾಲಿಗೆ ದೊರೆತಿದ್ದೇ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ.

ಅದ್ಭುತವಾದ ಕತೆ ಮತ್ತು ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿ ಅಡಕವಾಗಿದೆ. ಪಂಪನನ್ನು ನಿರ್ದೇಶಿಸಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆʼʼ ಎನ್ನುತ್ತಾರೆ ಸ್ವತಃ ನಿರ್ದೇಶಕ ಎಸ್ ಮಹೇಂದರ್.

ಈ ಸಿನಿಮಾ ಆರಂಭಗೊಂಡಿದ್ದರ ಹಿಂದೆಯೂ ಸೋಜಿಗದ ಸಂಗತಿಯಿದೆ. ಟೋಟಲ್ ಕನ್ನಡ ಎನ್ನುವ ಮಳಿಗೆಯನ್ನು ನಡೆಸುತ್ತಾ ಸಾಹಿತ್ಯ, ಸಿನಿಮಾ ವಲಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವವರು ವಿ. ಲಕ್ಷ್ಮೀಕಾಂತ್. ಇವರಿಗೆ ಕನ್ನಡದ ಕುರಿತಾದ ಒಂದು ಸಿನಿಮಾ ಮಾಡಬೇಕು ಎನ್ನುವ ಹಂಬಲವಿತ್ತು.

ಮೂರು ವರ್ಷಗಳ ಹಿಂದೆ ತಾವೇ ಒಂದು ಕಥೆಯ ಎಳೆ ಸಿದ್ದಪಡಿಸಿಕೊಂಡಿದ್ದರು. ನಂತರ ಹಂಸಲೇಖಾ ಮತ್ತು ಮಹೇಂದರ್ ಜೊತೆಯಾದ ಮೇಲೆ ಕಥೆ ಸಾಕಷ್ಟು ಬಣ್ಣ ಪಡೆಯಿತು. ಹಂಸಲೇಖಾ ಕೂಡಾ ಸ್ಕ್ರಿಪ್ಟ್ ರಚನೆಯಲ್ಲಿ ಭಾಗಿಯಾಗಿದ್ದು ತಂಡಕ್ಕೆ ಬಲ ಬಂದಂತಾಗಿತ್ತು. ಇವೆಲ್ಲದರ ಪ್ರತಿಫಲ ಎನ್ನುವಂತೆ ʻಪಂಪʼನ ಪವರ್ ಕೂಡಾ ಹೆಚ್ಚಿತು.

ಕೀ ಕ್ರಿಯೇಷನ್ಸ್ ಸಂಸ್ಥೆಯಿಂದ ವಿ. ಲಕ್ಷ್ಮೀಕಾಂತ್ (ಕಾಲವಿ) ನಿರ್ಮಿಸಿರುವ ಪಂಪ ಚಿತ್ರವನ್ನು ಎಸ್ ಮಹೇಂದರ್ ನಿರ್ದೇಶಿಸಿದ್ದಾರೆ. ಸಂಗೀತ ಮತ್ತು ಸಾಹಿತ್ಯ ಹಂಸಲೇಖ ಅವರದ್ದು. ರಮೇಶ್ ಬಾಬು ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನ, ಮಹೇಶ್ ದೇವ್ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರೊಫೆಸರ್ ಪಂಪನ ಪಾತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೀರ್ತಿ ಭಾನು ನಟಿಸಿದ್ದಾರೆ. ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ಇತರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮೂರು ವರ್ಷಗಳ ಸುದೀರ್ಘ ಕಾಲ ತೆಗೆದುಕೊಂಡು ಅಚ್ಚುಕಟ್ಟಾಗಿ ರೂಪುಗೊಂಡಿರುವ ಪಂಪ ಪರಿಪೂರ್ಣವಾಗಿ ತಯಾರಾಗಿದೆ. ಸದ್ಯ ಚಾಲ್ತಿಯಲ್ಲಿರುವ ಚಿತ್ರಮಂದಿರಗಳ ಲಾಕ್ ಡೌನ್ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಪಂಪನ ಬಿಡುಗಡೆಯ ಕುರಿತಾದ ಮಾಹಿತಿ ಲಭ್ಯವಾಗಲಿದೆ.

This Article Has 1 Comment
  1. Pingback: Skylar

Leave a Reply

Your email address will not be published. Required fields are marked *

Translate »
error: Content is protected !!