ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರುವ `ಚೋಳ’ ಚಿತ್ರ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆದುಕೊಂಡಿತ್ತು. ಸುರೇಶ್ ಡಿ.ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಭಿನ್ನವಾದ ಕಥಾನಕವನ್ನೊಳಗೊಂಡಿದೆ ಎಂಬಂಥಾ ನಂಬಿಕೆಯೂ ಮೊಳೆತುಕೊಂಡಿತ್ತು. ಇದೀಗ ‘ಚೋಳ’ ಇತ್ರದ ಟೀಸರ್ ಬಿಡುಗಡೆಗೊಂಡಿದೆ. ರೂರಲ್ ಸ್ಟಾರ್ ಅಂಜನ್ ಅಕ್ಷರಶಃ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಇದರೊಂದಿಗೆ ಸದರಿ ಸಿನಿಮಾ ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಎಲ್ಲ ದಿಕ್ಕುಗಳಲ್ಲಿಯೂ ಗಮನ ಸೆಳೆದಿದೆ. ಇದರೊಂದಿಗೆ ನಿರ್ದೇಶಕರಾಗಿ ರೂಪಾಂತರಗೊಂಡಿರುವ ಸುರೇಶ್ ಡಿ.ಎಂ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದವರು ಸುರೇಶ್ ಡಿ.ಎಂ. ನಿರ್ಮಾಪಕರಾಗಿದ್ದುಕೊಂಡೇ ತಮ್ಮ ಭಿನ್ನ ಅಭಿರುಚಿಯನ್ನು ಸಾಬೀತುಪಡಿಸಿದ್ದ ಅವರು, ಚೋಳ ಮೂಲಕ ನಿರ್ದೇಶಕರಾದ ಸುದ್ದಿ ಹೊರ ಬಂದಾಗ ಸಹಜವಾಗಿಯೇ ಕುತೂಹಲ ಮೂಡಿಕೊಂಡಿತ್ತು. ಈ ಟೀಸರ್ ಅವರ ಕಸುಬುದಾರಿಕೆಯನ್ನು ಎತ್ತಿ ಹಿಡಿದಿದೆ. ನಾನಾ ಅಂಶಗಳು ಮಿಳಿತವಾಗಿರುವ ಪಕ್ಕಾ ರಗಡ್ ಕಥೆಯೊಂದಿಗೆ ಸುರೇಶ್ ಅವರು ಈ ಚಿತ್ರವನು ರೂಪಿಸಿರೋದು ಟೀಸರ್ ಮೂಲಕ ಋಜುವಾತಾಗಿದೆ. ಪ್ರೇಕ್ಷಕರಲ್ಲೊಂದು ನಿರೀಕ್ಷೆ ಮೂಡಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿಯೂ ಈ ಟೀಸರ್ ಯಶ ಕಂಡಿದೆ.
ರೂರಲ್ ಸ್ಟಾರ್ ಅಂಜನ್, ಸಿಕ್ಕ ಸೀಮಿತ ಅವಕಾಶದಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡಿದ್ದವರು. ಈ ಹುಡುಗನಿಗೆ ಸರಿಕಟ್ಟಾದೊಂದು ಅವಕಾಶ ಸಿಕ್ಕರೆ ಹೀರೋ ಆಗಿ ನೆಲೆ ಕಂಡುಕೊಳ್ಳುತ್ತಾರೆಂಬಂತೆ ಪ್ರೇಕ್ಷಕರೇ ಅಭಿಪ್ರಾಯ ಪಟ್ಟಿದ್ದರು. ಕಡೆಗೂ ಸುರೇಶ್ ಡಿ.ಎಂ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಫಲವಾಗಿಯೇ ಅಂಜನ್ ಮಾಸ್ ಮೂಡಿನಲ್ಲಿ ಆರ್ಭಟಿಸಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಈ ಟೀಸರ್ ನೋಡಿದವರೆಲ್ಲರೂ ಖುಷಿಗೊಂಡಿದ್ದಾರೆ. ಇದರಲ್ಲೇನೋ ವಿಶೇಷವಾದುದಿದೆ ಎಂಬ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.
ಸುರೇಶ್ ಡಿ.ಎಂ ಸೃಷ್ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ಇಲ್ಲಿ ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ. ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.
ಚೋಳ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಬಹುತೇಕರ ಗಮನ ಬೇರೆತ್ತಲೋ ವಾಲಿಕೊಂಡಿತ್ತು. ಆದರೆ, ಇದೊಂದು ಆಧುನಿಕ ದಿನಮಾನದ ಕಥನ ಎಂಬುದನ್ನು ಈ ಟೀಸರ್ ಸಾರಿ ಹೇಳಿದೆ. ಪ್ರೀತಿ, ರೌಡಿಸಂ ಸೇರಿದಂತೆ ಅನೇಕ ಅಂಶಗಳನ್ನು ಸದರಿ ಕಥನ ಒಳಗೊಂಡಿದೆ. ಅದು ನಿಜಕ್ಕೂ ಭಿನ್ನವಾಗಿದೆ ಎಂಬುದು ಈ ಟೀಸರ್ ಮುಖೇನ ಜಾಹೀರಾಗಿದೆ. ಈಗಾಗಲೇ ಒಂದಷ್ಟು ಭಾಗಗಳ ಚಿತ್ರೀಕರಣ ಸುಸೂತ್ರವಾಗಿ ನೆರವೇರಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲು ಸುರೇಶ್ ಅವರು ಪ್ಲಾನು ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಚೋಳ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.
Be the first to comment