ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದಲ್ಲಿ ಕನ್ನಡದ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಈಗಾಗಲೇ ಕುತೂಹಲ ಹುಟ್ಟುಹಾಕಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಈಗಾಗಲೇ ಚಿತ್ರತಂಡ ಸೇರಿಕೊಂಡಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ಚಿತ್ರತಂಡ ಸೇರಲಿದ್ದಾರೆ.
ಟಾಕ್ಸಿಕ್ ಬಗ್ಗೆ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ರುಕ್ಮಿಣಿ ಈಗಾಗಲೇ ಈ ಯೋಜನೆಗಾಗಿ ಒಂದೆರಡು ವೇಳಾಪಟ್ಟಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೀರ್‌ಬಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರುಕ್ಮಿಣಿ ವಸಂತ್, ಬಳಿಕ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಈಗ ಕನ್ನಡ ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ವಿಜಯ್ ಸೇತುಪತಿ ಜೊತೆಗೆ ತಮಿಳಿನ ‘ಏಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮತ್ತು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ; ಚಾಪ್ಟರ್ 1ರಲ್ಲೂ ಅವರು ನಟಿಸಿದ್ದಾರೆ.
ವೆಂಕಟ್ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್, ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಟಾಕ್ಸಿಕ್ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಲಾಗಿದೆ. ಇದುಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಚಿತ್ರ ಮುಂದಿನ ವರ್ಷ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.






Be the first to comment