“ಆಪರೇಶನ್ ಅಲಮೇಲ್ಲಮ್ಮ”, “ಕವಲುದಾರಿ” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಜನಪ್ರಿಯ “ಸೈತಾನ್” ವೆಬ್ ಸಿರೀಸ್ ಮೂಲಕ ಮನೆಮಾತಾಗಿರುವ ನಟ ರಿಷಿ ಅಭಿನಯದ ಬಹು ನಿರೀಕ್ಷಿತ “ರುದ್ರ ಗರುಡ ಪುರಾಣ” ಚಿತ್ರ 2025 ರ ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮುಂಚೆ ಡಿಸೆಂಬರ್27 ಈ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿತ್ತು. ಪೋಸ್ಟ್ ಪ್ರೊಡಕ್ಷನ್ ವರ್ಕ್ ಇನ್ನು ಬಾಕಿ ಇರುವುದರಿಂದ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೂಡಲಾಗಿದೆ ಎನ್ನುತ್ತಾರೆ ನಿರ್ಮಾಪಕರು.
ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ(ತನಿಖಾಧಿಕಾರಿ) ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಗೆ ಅಭಿಮಾನಿಯ ಫಿದಾ ಆಗಿದ್ದಾರೆ ಹಾಗೂ ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ “ಡಿಯರ್ ವಿಕ್ರಮ್” ಚಿತ್ರವನ್ನು ನಿರ್ದೇಶಿಸಿದ್ದ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಈ ಚಿತ್ರಕ್ಕಿದೆ.
25 ವರ್ಷದ ಹಿಂದೆ ಬಸ್ಸೊಂದು ಅಪಘಾತವಾಗಿ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿರುತ್ತಾರೆ ಆದರೆ ಅದೇ ಬಸ್ಸು ಮತ್ತು ಅದರಲ್ಲಿದ್ದ ಜನಗಳು ಮತ್ತೆ ವಾಪಸ್ಸು ಬರುವ ರೋಚಕ ತಿರುಗಳನ್ನು ಅನ್ವೇಷಣೆ ಮಾಡುವ ಚಿತ್ರ “ರುದ್ರ ಗರುಡ ಪುರಾಣ”. ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ಕೆಲವರು ಇದು ತಮಿಳಿನ ಡೈರಿ ಸಿನಿಮಾದ ರಿಮೇಕ್ ಎಂದು ಕೇಳಿದ್ದರು ನಾನು ಆ ಚಿತ್ರ ನೋಡಿರಲಿಲ್ಲ ಆದರೆ ಕುತೂಹಲದಿಂದ ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಮ್ಯೂಸಿಕ್ ಡೈರೆಕ್ಟರ್ ಕೇಳಿದಾಗ ಅದಕ್ಕೂ ನಮ್ಮ ಸಿನಿಮಾ ಯಾವುದೇ ಸಾಮ್ಯತೆ ಇರುವುದಿಲ್ಲ ಟೀಸರ್ ನಲ್ಲಿ ನಲ್ಲಿ ಬಸ್ ಅಪಘಾತ ಇರುವುದರಿಂದ ಅದಕ್ಕೆ ಹೋಲಿಸಿಕೊಂಡಿದ್ದಾರೆ ಎಂದು ಹೇಳಿದರು ಆದರೂ ನಮಗೆ ಬರುವ ಯೋಚನೆ ಬೇರೆಯವರಿಗೆ ಬರಬಾರದು ಎಂಬುದು ಇಲ್ಲ ಆದ್ದರಿಂದ ಚಿತ್ರ ಹುಡುಕಿ ನೋಡಿದಾಗ ತಮಿಳು ಚಿತ್ರಕ್ಕೂ ನಮಗೂ ಯಾವುದೇ ಚಿಕ್ಕ ಸಂಬಂಧವೂ ಇಲ್ಲ. ಇದೊಂದು ಪಕ್ಕಾ ಕನ್ನಡದ ಸ್ವಮೇಕ್ ಚಿತ್ರ ಎನ್ನುತ್ತಾರೆ ನಿರ್ದೇಶಕ ನಂದೀಶ್.
ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ರಿದ್ವಿ, ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
Be the first to comment