ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಲಿರಿಕಲ್ ಸಾಂಗ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿಡುಗಡಯಾದ ಮೂರೇ ದಿನಕ್ಕೆ ಆರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಗೊಂಡು ಜನಪ್ರಿಯವಾಗಿದೆ.
ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಬರೆದಿರುವ “ಕನಸಿನಲ್ಲಿ ನಾ ನಡೆವೆ” ಎಂಬ ಸುಂದರಹಾಡನ್ನು ಸುಮಧುರ ಕಂಠದ ಗಾಯಕ ಸಂಚಿತ್ ಹೆಗ್ಡೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಬಿ.ಜೆ.ಭರತ್ ಈ ಚಿತ್ರದ ಸಂಗೀತ ನಿರ್ದೇಶಕರು. ಕಾಲು ಕಳೆದುಕೊಂಡಿರುವ ಹುಡುಗ ಹಾಗೂ ಕಣ್ಣಿಲ್ಲದಿರುವ ಹುಡುಗಿಯ ಪ್ರೇಮಕಥೆಯ “ವ್ಹೀಲ್ ಚೇರ್ ರೋಮಿಯೋ”ದಲ್ಲಿ ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ನೋಡುಗರ ಗಮನ ಸೆಳೆಯಲಿದೆಯಂತೆ.
ಈಗಾಗಲೇ ಬೆಂಗಳೂರು, ಮುಂಬೈ ಮುಂತಾದ ಕಡೆ ಚಿತ್ರೀಕರಣಗೊಂಡು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.
ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಮ್ ಚೇತನ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಯೂರಿ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನ ” ವ್ಹೀಲ್ ಚೇರ್ ರೋಮಿಯೋ” ಚಿತ್ರಕ್ಕಿದೆ.
Be the first to comment