ರಿಪ್ಪನ್ ಸ್ವಾಮಿ

Movie Review: ರಿಪ್ಪನ್ ಸ್ವಾಮಿಯಲ್ಲ.. ನರರಾಕ್ಷಸ..!

ಚಿತ್ರ : ರಿಪ್ಪನ್ ಸ್ವಾಮಿ
ನಿರ್ದೇಶನ : ಕಿಶೋರ್ ಮೂಡುಬಿದಿರೆ
ನಿರ್ಮಾಣ : ಪಂಚಾನನ ಫಿಲ್ಮ್ಸ್
ತಾರಾಗಣ : ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್ ಮೊದಲಾದವರು.
ರೇಟಿಂಗ್ : 3.5/5

ಚಿತ್ರದಲ್ಲಿ ನಾಯಕನ ಹೆಸರು ಸ್ವಾಮಿ. ಅಡ್ಡ ಹೆಸರು ಸೇರಿಸಿ ಕರೆಯುವುದಾದರೆ ರಿಪ್ಪನ್ ಸ್ವಾಮಿ. ಹಾಗಂತ ಈತ ಸ್ವಾಮಿಯಂತೆ ದೈವಿಕ ಗುಣದವನೇನಲ್ಲ. ರಾಕ್ಷಸನಂಥವನು. ಬಹುಶಃ ವಿಜಯ ರಾಘವೇಂದ್ರ ಇಂಥದೊಂದು ಪಾತ್ರವನ್ನು ಈ ಹಿಂದೆಂದೂ ಮಾಡಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ರಿಪ್ಪನ್ ಸ್ವಾಮಿ ಮಲೆನಾಡಿನ ಬೃಹತ್ ಎಸ್ಟೇಟ್‌ಗೆ ಒಡೆಯ. ತನ್ನ ವಿರೋಧಿಗಳನ್ನು ಕೈಯಾರೆ ಹೊಡೆದು ಹಾಕುವಲ್ಲಿ ನಿಸ್ಸೀಮ. ಹಂದಿ‌ ಸಾಕಾಣಿಕೆ ನಡೆಸಿ ಮಾಂಸದ ವ್ಯವಹಾರ ನಡೆಸುವಾತ. ಹಂದಿಯಂತೆ ಭಾವವೇ ಇಲ್ಲದೇ ಬದುಕುವಾತ. ವಿಜಯರಾಘವೇಂದ್ರ ಕರಿಯರ್ ನಲ್ಲಿ ಇಂಥದೊಂದು ಪಾತ್ರ ತೀರ ಹೊಸದು. ಅದನ್ನು ನಿರ್ವಹಿಸಿರುವ ರೀತಿಗೆ ಪ್ರಶಸ್ತಿ ಬಂದರು ಅಚ್ಚರಿ ಏನಿಲ್ಲ.

ಪೂರ್ತಿ ಚಿತ್ರದಲ್ಲಿ ಸ್ವಾಮಿಯೇ ತುಂಬಿಕೊಂಡಿದ್ದಾನೆ. ಸ್ವಾಮಿಗೊಬ್ಬಳು ಮುದ್ದಾದ ಮಡದಿ ಇದ್ದಾಳೆ. ವೃತ್ತಿಯಲ್ಲಿ ಆಯುರ್ವೇದ ವೈದ್ಯೆ. ಆದರೆ ಈಕೆಯ ಸೇವೆ ಸ್ವಾಮಿಗಷ್ಟೇ ಮೀಸಲು. ಮಂಗಳಾ ಪಾತ್ರವನ್ನು ನಟಿ ಅಶ್ವಿನಿ ಚಂದ್ರಶೇಖರ್ ನಿರ್ವಹಿಸಿದ್ದಾರೆ. ಎಂದೂ‌ ಭಾವುಕಗೊಳ್ಳದ ಸ್ವಾಮಿ ಒಂದು ಕಡೆಯಲ್ಲಿ ತನ್ನ ಪ್ರೇಮದ‌ ಕತೆಯನ್ನು ಕೂಡ ತಾನೇ ಹೇಳುತ್ತಾನೆ. ಸಂಪೂರ್ಣವಾಗಿ ಮಲೆನಾಡಲ್ಲೇ ನಡೆಯುವ ಕಥೆ‌ ಇದು.‌ ಕಲಾವಿದರಲ್ಲಿ ಹೆಚ್ಚಿನ ಮಂದಿ ಮಂಗಳೂರು ಕರಾವಳಿಯವರು. ಪ್ರಕಾಶ್ ತೂಮಿನಾಡು ಸೇರಿದಂತೆ ಸ್ನೇಹಿತರ ವರ್ಗದ ಪಾತ್ರಗಳು ನಗು ತರಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರದ ಪಾತ್ರ ವರ್ಗಗಳನ್ನು ಕೂಡ ಕಿಶೋರ್ ಸಮರ್ಥವಾಗಿ ಆಯ್ಕೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ರೂಪಾರನ್ನು ನೆನಪಿಸುವಂಥ ಮಹಿಳಾ ಪೊಲೀಸ್ ಅಧಿಕಾರಿ ಅಂಜುಮಾಲ ಪಾತ್ರದಲ್ಲಿ ಹೊಸ ಪ್ರತಿಭೆ ಅನುಷ್ಕಾರನ್ನು ಪರಿಚಯಿಸಿದ್ದಾರೆ. ‌ಮೊದಲ ಚಿತ್ರದಲ್ಲೇ ಈ ರಂಗಭೂಮಿಯ ಪ್ರತಿಭೆ ಮನಸೆಳೆಯುವ ನಟನೆ ನೀಡಿದ್ದಾರೆ. ಪಿ.ಸಿ ದೇಜಣ್ಣನಾಗಿ ಮತ್ತೋರ್ವ ರಂಗನಟ ಕೃಷ್ಣಮೂರ್ತಿ ಕವತ್ತಾರು ಕೂಡ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು ಆಕರ್ಷಕವಾಗಿವೆ. ಸ್ಯಾಮುಯೆಲ್ ನೀಡಿರುವ ಹಿನ್ನೆಲೆ ಸಂಗೀತ ಕೂಡ ಉತ್ತಮವಾಗಿದೆ.‌ ಮಾಸ್ ಮಾದ ಸಾಹಸ ಭರ್ಜರಿಯಾಗಿದೆ. ಇದು ವಿಜಯರಾಘವೇಂದ್ರ ಅಭಿಮಾನುಗಳು ಮಾತ್ರವಲ್ಲ, ಮಾಸ್ ಪ್ರಿಯ ಸಿನಿಮಾ ಪ್ರೇಕ್ಷಕರು ಕೂಡ ನೋಡಬೇಕಾದಂಥ ಚಿತ್ರ.

Be the first to comment

Leave a Reply

Your email address will not be published. Required fields are marked *

Translate »
error: Content is protected !!