ಡಿ.16ಕ್ಕೆ ರೈಡರ್ ಟ್ರೈಲರ್

ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಟ್ರೈಲರ್ ಡಿಸೆಂಬರ್ 16ರಂದು ಸಂಜೆ 6.54ಕ್ಕೆ ಬಿಡುಗಡೆಯಾಗಲಿದೆ.

ಚಿತ್ರ ಇದೇ ತಿಂಗಳ 24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರ ಕನ್ನಡದ ಮೊದಲ ಕಮರ್ಷಿಯಲ್ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ನಿಖಿಲ್ ಕುಮಾರ್, ಕಶ್ಮೀರ ಪರದೇಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಲಹರಿ ಪ್ರೊಡಕ್ಷನ್ಸ್‌ ಹಾಗೂ ಶಿವನಂದಿ ಎಂಟ್ರೈನ್‌ಮೆಂಟ್ಸ್ ನಿರ್ಮಾಣ ಮಾಡಿವೆ.

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್‌ಕುಮಾರ್‌, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ ತಾರಾಗಣದಲ್ಲಿದ್ದಾರೆ.

ಕನ್ನಡದ ಜೊತೆಗೆ ತೆಲುಗಿನಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ನಿಖಿಲ್ ನಟನೆಯ ಮೊದಲ ಸಿನಿಮಾ ಜಾಗ್ವಾರ್ ಕನ್ನಡ-ತೆಲುಗು ಭಾಷೆಯಲ್ಲಿ ತೆರೆಗೆ ಬಂದಿತ್ತು. ಬಳಿಕ ಬಂದ ‘ಕುರುಕ್ಷೇತ್ರ’ ಚಿತ್ರ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಈಗ ‘ರೈಡರ್‌’ ಮೂಲಕ ಮತ್ತೊಮ್ಮೆ ಬಹುಭಾಷಾ ಸಿನಿಮಾಕ್ಕೆ ನಿಖಿಲ್ ಕುಮಾರಸ್ವಾಮಿ ಕೈ ಹಾಕಿದ್ದಾರೆ.

ಈಗಾಗಲೇ ‘ರೈಡರ್’ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿದೆ. ಸಿನಿಮಾವನ್ನು ಮೈಸೂರು, ಮಂಗಳೂರು, ಬೆಂಗಳೂರು, ಶಿರಸಿ ಅಲ್ಲದೇ ಲೇಹ್‌ ಲಡಾಖ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ನಿಖಿಲ್‌ ಅವರು ಬ್ಯಾಸ್ಕೆಟ್‌ಬಾಲ್‌ ಆಟಗಾರನ ಪಾತ್ರ ಮಾಡಿದ್ದಾರೆ. ನಿಖಿಲ್ ಅವರು ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಕಾಣಿಸಿಕೊಳ್ಳಲು ಮೂರು ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ. ಎಲ್ಲರಿಗೂ ಹೆಚ್ಚು ಪರಿಚಿತವಾಗಿರುವ ಕ್ರೀಡೆ ಬಗ್ಗೆ ಹೇಳುವುದಕ್ಕಿಂತ, ಅಷ್ಟಾಗಿ ಗೊತ್ತಿಲ್ಲದಿರುವ ಕ್ರೀಡೆ ಬಗ್ಗೆ ಹೇಳಿದರೆ ಜನ ಇಷ್ಟಪಡುತ್ತಾರೆ ಎನ್ನುವ ಕಾರಣಕ್ಕೆ ಬಾಸ್ಕೆಟ್‌ ಬಾಲ್‌ ಕ್ರೀಡೆಯ ಕಥೆಯನ್ನು ಮಾಡಲಾಗಿದೆ ಎಂದು ನಿರ್ದೇಶಕ ವಿಜಯ್‌ ಕುಮಾರ್‌ ಹೇಳಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!