‘ರಿಚರ್ಡ್ ಆಂಟನಿ’ ಚಿತ್ರ ವರ್ಷಾಂತ್ಯಕ್ಕೆ ಪ್ರಾರಂಭವಾಗಲಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ರಕ್ಷಿತ್ ಶೆಟ್ಟಿ ‘ಬಹಳಷ್ಟು ಜನ ‘ರಿಚರ್ಡ್ ಆಂಟನಿ’ ಚಿತ್ರ ಯಾವಾಗ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಅವಸರವಿಲ್ಲ. ದೊಡ್ಡ ಕನಸಿಗೆ ಸಮಯ ಜಾಸ್ತಿ ಬೇಕಾಗುತ್ತದೆ. ಸದ್ಯ ನಾನು ಸ್ಕ್ರಿಪ್‍ನಲ್ಲಿ ತೊಡಗಿಸಿಕೊಂಡಿದ್ದೇನೆ. ಬಹುತೇಕ ಮುಗಿದಿದೆ. ಈಗಾಗಲೇ ಒಮ್ಮೆ ದುಬೈಗೆ ಹೋಗಿ ಲೊಕೇಶನ್ ನೋಡಿಕೊಂಡು ಬಂದಿದ್ದೇನೆ. ಸೆಪ್ಟೆಂಬರ್‍ನಲ್ಲಿ ಅಮೇರಿಕಾಗೆ ಲೊಕೇಶನ್ ನೋಡುವುದಕ್ಕೆ ಹೋಗುತ್ತಿದ್ದೇನೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಕಾಲ ವಿದೇಶ ಭಾಗ ಬರುತ್ತದೆ. ಅವೆರಡೂ ಕಡೆ ಚಿತ್ರೀಕರಣ ನಡೆಯಲಿದೆ’ ಎಂದಿದ್ದಾರೆ.
‘ಸಾಮಾನ್ಯವಾಗಿ ನನ್ನ ಪ್ರತಿ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೂ ಒಂದೂವರೆ ವರ್ಷ ಬೇಕು. ಈ ಬಾರಿ ಬರೀ ‘ರಿಚರ್ಡ್ ಆಂಟನಿ’ ಅಷ್ಟೇ ಅಲ್ಲ, ‘ಮಿಡ್‍ವೇ ಟು ಮೋಕ್ಷ’ ಮತ್ತು ‘ಪುಣ್ಯಕೋಟಿ 1 ಮತ್ತು 2’ ಚಿತ್ರಗಳ ಚಿತ್ರಕಥೆ ಜೊತೆಗೆ ಬರೆಯುತ್ತಿದ್ದೇನೆ. ಆ ಮೂರೂ ಕಥೆಗಳು ರೆಡಿ ಇವೆ. ಈ ಎಲ್ಲಾ ಚಿತ್ರಗಳು ಒಂದರ ಹಿಂದೊಂದು ಬರಲಿವೆ. ಮೊದಲಿಗೆ ಈ ವರ್ಷಾಂತ್ಯಕ್ಕೆ ‘ರಿಚರ್ಡ್ ಆಂಟನಿ’ ಶುರು ಆಗಲಿದೆ. ಮುಂದಿನ ವರ್ಷದ ಕೊನೆಗೆ ಚಿತ್ರ ಬಿಡುಗಡೆ ಆಗಲಿದೆ. ಅದು ತಪ್ಪಿದರೂ, 2026ಕ್ಕೆ ನನ್ನ ಎರಡು ಸಿನಿಮಾಗಳು ಬರುವುದು ಖಂಡಿತ. ‘ರಿಚರ್ಡ್ ಆಂಟನಿ’ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ‘ಮಿಡ್ವೇ ಟು ಮೋಕ್ಷ’ ಪ್ರಾರಂಭವಾಗಲಿದೆ’ ಎಂದಿದ್ದಾರೆ.
ಈ ಹಿಂದೆ ಹೊಂಬಾಳೆ ಫಿಲಂಸ್ ಸಂಸ್ಥೆ ‘ರಿಚರ್ಡ್ ಆಂಟನಿ’ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿತ್ತು. ಆದರೆ ಇದೀಗ ನಿರ್ಮಾಣದಿಂದ ಹೊಂಬಾಳೆ ಫಿಲಂಸ್ ಹಿಂದೆ ಸರಿದಿದೆ ಎನ್ನಲಾಗಿದೆ. ಈ ಕುರಿತು ಹೊಂಬಾಳೆ ಆಗಲೀ, ರಕ್ಷಿತ್ ಆಗಲೀ ಸ್ಪಷ್ಟನೆ ನೀಡಿಲ್ಲ.
‘ರಿಚರ್ಡ್ ಆಂಟನಿ’ ಚಿತ್ರದಲ್ಲಿ ಬಹಳಷ್ಟು ಜನ ಸ್ಥಳೀಯ ಪ್ರತಿಭೆಗಳಿರುತ್ತಾರೆ. ಚಿತ್ರದಲ್ಲಿ ಉಡುಪಿಯ ಸೊಗಡು ಇರುತ್ತದೆ. ಇಲ್ಲಿನ ಸೊಗಡ ಬಗ್ಗೆ ಗೊತ್ತಿಲ್ಲದವರು ಮಾತಾಡಿದರೆ ಅನುಕರಣೆ ಮಾಡಿದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಕಲಾವಿದರೂ ಉಡುಪಿಯವರೇ ಆಗಿರುತ್ತಾರೆ’ ಎಂದು ರಕ್ಷಿತ್ ಈ ಹಿಂದೆ ಹೇಳಿದ್ದರು.
Be the first to comment