ದರ್ಶನ್ ನಟನೆಯ, ದಿನಕರ್ ತೂಗುದೀಪ ನಿರ್ದೇಶನದ ‘ನವಗ್ರಹ’ ಸಿನಿಮಾದ ಶುಕ್ರವಾರದ ರೀ-ರಿಲೀಸ್ ಗೆ ರಾಜ್ಯಾದ್ಯಂತ ಸಿದ್ಧತೆ ನಡೆದಿದೆ. ಇದೆಲ್ಲದರ ನಡುವೆ ಪ್ರಸನ್ನ ಚಿತ್ರಮಂದಿರದ ಮಾಲೀಕರು ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
“ನಮಸ್ತೇ, ಕನ್ನಡ ಚಲನಚಿತ್ರ ಪ್ರೇಕ್ಷಕ ಮತ್ತು ನಮ್ಮ ನಿಮ್ಮೆಲ್ಲರ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ, ನಿಮ್ಮಲ್ಲಿ ನಾವುಗಳು ಕೈಮುಗಿದು ಕಳಕಳಿ ಮಾಡುವುದು ಏನು ಎಂದರೆ ದಯವಿಟ್ಟು ಯಾರು ಕೂಡ ‘ನವಗ್ರಹ’ ಸಿನಿಮಾ ನೋಡಲು ಬಂದಾಗ ಯಾರ ವಿರುದ್ದವೂ ಕೂಡ ಘೋಷಣೆ ಕೂಗುವುದು ಅಥವಾ ಧಿಕ್ಕಾರ ಕೂಗುವುದು ದಯವಿಟ್ಟು ಮಾಡಬೇಡಿ. ಯಾವುದೇ ರೀತಿ ಗಲಾಟೆಗಳನ್ನೂ ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ.
“ನೀವು ಇದನ್ನೆಲ್ಲಾ ಪಾಲನೆ ಮಾಡದಿದ್ದರೆ ಇದರಿಂದ ತೊಂದರೆಯಾಗುವುದು ನೇರವಾಗಿ ನಿರ್ಮಾಪಕನಿಗೆ, ಪ್ರಸನ್ನ ಚಿತ್ರಮಂದಿರಕ್ಕೆ ಮತ್ತು ದರ್ಶನ್ ಸರ್‌ಗೆ. ದಯವಿಟ್ಟು ಪ್ರತಿಯೊಬ್ಬರು ಕೂಡ ತುಂಬಾ ಜವಾಬ್ದಾರಿಯಿಂದ ವರ್ತಿಸಿ ಸಿನಿಮಾ ನೋಡಿ ಆನಂದಿಸಿಬೇಕು. ಯಾರು ಕೂಡ ‘ಕರಿಯ’ ಚಿತ್ರದ ಸಮಯದಲ್ಲಿ ಆದ ಕೆಟ್ಟ ಗಳಿಗೆಯನ್ನು ಆಗದಂಗೆ ಕಾಪಾಡಬೇಕು” ಎಂದು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಸನ್ನ ಚಿತ್ರಮಂದಿರದವರು ಪೋಸ್ಟ್ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ದರ್ಶನ್ ನಟನೆಯ ‘ಕರಿಯ’ ಸಿನಿಮಾ ರೀ-ರಿಲೀಸ್ ಆಗಿತ್ತು. ಆ ಸಮಯದಲ್ಲಿ ಪ್ರಸನ್ನ ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಯೊಬ್ಬ ಪುಂಡಾಟ ಮೆರೆದಿದ್ದ ಘಟನೆ ನಡೆದಿತ್ತು. ಅವಾಚ್ಯ ಶಬ್ಧಗಳಿಂದ ನಿಂದಿಸಿ ಉದ್ಧಟತನ ತೋರಿದ ಕೆಲವರ ವಿರುದ್ಧ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ ಸದ್ಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಅಕ್ಟೋಬರ್ 30ರಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
16 ವರ್ಷಗಳ ಹಿಂದೆ ನವೆಂಬರ್ 7ಕ್ಕೆ ‘ನವಗ್ರಹ’ ಚಿತ್ರ ತೆರೆಗೆ ಬಂದಿತ್ತು. ಇದೀಗ ನವೆಂಬರ್ 8ಕ್ಕೆ ರೀ-ರಿಲೀಸ್ ಆಗುತ್ತಿರುವುದು ವಿಶೇಷ. ಸ್ವತಃ ದರ್ಶನ್ ‘ನವಗ್ರಹ’ ಚಿತ್ರ ನಿರ್ಮಿಸಿ ನಟಿಸಿದ್ದರು. ಮೈಸೂರು ಅರಮನೆಯ ಅಂಬಾರಿಯನ್ನು ಕದಿಯುವ ಕಥೆಯನ್ನು ಚಿತ್ರ ಒಳಗೊಂಡಿದೆ. ಕನ್ನಡದ ಖ್ಯಾತ ಖಳನಟರ ಮಕ್ಕಳೆಲ್ಲಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದರ್ಶನ್ ನೆಗೆಟಿವ್ ಶೇಡ್ ರೋಲ್‌ನಲ್ಲಿ ಮಿಂಚಿದ್ದಾರೆ.
ಕೆಜಿ ರಸ್ತೆಯ ನರ್ತಕಿ, ಮಾಗಡಿ ಪ್ರಸನ್ನ ರಸ್ತೆಯ ಪ್ರಸನ್ನ ಸೇರಿ ಹಲವೆಡೆ ‘ನವಗ್ರಹ’ ಸಿನಿಮಾ ಪ್ರದರ್ಶನಗೊಳ್ಳಲಿದೆ.
—-
Be the first to comment