ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲಿನ ಯಾಕೆ ಲೈಂಗಿಕ ದೌರ್ಜನ್ಯ ಸಮಿತಿ ರಚಿಸಬೇಕು ಅಥವಾ ರಚಿಸಬಾರದು ಎಂಬುದಕ್ಕೆ 15 ದಿನದಲ್ಲಿ ವಿವರವಾದ ವರದಿ ನೀಡುವಂತೆ ನಾಗಲಕ್ಷ್ಮೀ ಚೌಧರಿ ನೇತೃತ್ವದ ಮಹಿಳಾ ಆಯೋಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗಡುವು ಸೂಚಿಸಿದೆ.
ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ, ವಿವರವಾದ ವರದಿ ನೀಡುವಂತೆ ಸೂಚಿಸಿದೆ.
ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೊರಗೆ ಬಂದರೆ ಹಣ ಹೂಡಿಕೆ ಕುಸಿಯಲಿದೆ. ಇದರಿಂದ ಬೆಳವಣಿಗೆ ಆಗುತ್ತಿರುವ ಕನ್ನಡ ಚಿತ್ರರಂಗ ಮತ್ತೆ ತತ್ತರಿಸಲಿದೆ. ಇದರಿಂದ ಮುಂದೆ ಬರಲು ಜನ ಹಿಂದೆ ಮುಂದೆ ನೋಡುತ್ತಾರೆ ಎಂದು ಕೆಲವು ನಿರ್ಮಾಪಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ನಟಿಯರ ರಕ್ಷಣೆಗೆ ಸಮಿತಿ ಬೇಕು. ನಮ್ಮ ಮೇಲಿನ ದೌರ್ಜನ್ಯ ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲ ಎಂದು ಕೆಲವು ನಟಿಯರು ವಾದಿಸಿದರು. ಇದರಿಂದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಲಿಲ್ಲ.
ಮಹಿಳೆಯರ ಸುರಕ್ಷತೆಯ ಕುರಿತು ಸಮಿತಿ ರಚನೆಗೆ ಕನ್ನಡ ಚಿತ್ರರಂಗದ ಹಿರಿಯ ನಾಯಕಿಯರಿಂದ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗದಲ್ಲಿ ಯಾವ ಲೈಂಗಿಕ ಕಿರುಕುಳ ಇಲ್ಲ. ಯಾವ ಸಮಿತಿ ಬೇಡ ಎಂದು ಭಾವನಾ ರಾಮಣ್ಣ ಹೇಳಿದರು. ನೀತು, ನಿರ್ದೇಶಕಿ ಕವಿತಾ ಲಂಕೇಶ್ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇದೆ ಸಮಿತಿ ಬೇಕು ಎಂದರು.
ಚಿತ್ರೀಕರಣದ ನೆಪದಲ್ಲಿ ಕೆಟ್ಟದಾಗಿ ಮುಟ್ಟುತ್ತಾರೆ, ಮಾತನಾಡುತ್ತಾರೆ, ನಾನು ನನ್ನ ಕಣ್ಣಾರೆ ಇದೆಲ್ಲವನ್ನು ನೋಡಿದ್ದೇನೆ. ಮಾತನಾಡಲು ಮುಂದಾದರೆ ಸಾಕು ಸಾರಾ ಗೋವಿಂದು ಕುತ್ಕೋ ಎಂದು ಗದರಿಸುತ್ತಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಾಯ ಕೇಳಿ ಬಂದಾಗ ನನಗೆ ಇಲ್ಲಿ ಯಾರು ಸಹಾಯ ಮಾಡಲಿಲ್ಲ ಈಗ ಮಾಡುತ್ತಾರಾ? ಕಮಿಟಿ ಆಗಬೇಕು ಅನ್ನೋದು ಗೆಜೆಟ್ ನಲ್ಲಿಯೇ ಇದೆ. ಕಮಿಟಿ ರಚನೆ ಆದರೆ ನನಗೆ ಆದ ಅನುಭವವನ್ನು ಅವರ ಜೊತೆ ನಾನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ನೀತು ಹೇಳಿದ್ದಾರೆ.
Be the first to comment