ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ವೀಕ್ಷಣೆ ಕೇಂದ್ರ ಟ್ರೈಲರ್ ಎನ್ನುವ ಖ್ಯಾತಿಗೆ ‘ಕೆಜಿಎಫ್ 2’ ಪಾತ್ರವಾಗಿದೆ.
ಬಿಡುಗಡೆಯಾದ 24 ಗಂಟೆಗಳಲ್ಲಿ 109 ಮಿಲಿಯನ್ ವೀಕ್ಷಣೆ ಕಂಡ ಈ ಟ್ರೈಲರ್ ಈಗಲೂ ಟ್ರೆಂಡಿಂಗ್ ಆಗುತ್ತಲೇ ಇದೆ. ಒಟ್ಟಾರೆ ಕೆಜಿಎಫ್2 ಟ್ರೈಲರ್ ನೋಡಿದವರ ಸಂಖ್ಯೆ 13 ಕೋಟಿ ಮೀರಿದೆ.
ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಟ್ರೈಲರ್ ಬಿಡುಗಡೆ ಆಗಿದೆ. ಹಿಂದಿ ಟ್ರೈಲರ್ ಅತ್ಯಂತ ಹೆಚ್ಚು ಮಂದಿ ವೀಕ್ಷಿಸಿದ್ದು, ಅವರ ಸಂಖ್ಯೆ ಆರು ಕೋಟಿ ದಾಟಿದೆ.
ತೆಲುಗಿನಲ್ಲಿ 2.6 ಕೋಟಿ, ಕನ್ನಡದಲ್ಲಿ 2.1 ಕೋಟಿ ತಮಿಳಿನಲ್ಲಿ 1.5 ಕೋಟಿ ಹಾಗೂ ಮಲಯಾಳಂನಲ್ಲಿ ಒಂದು ಕೋಟಿ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಅನ್ಯ ಭಾಷೆಗಳಲ್ಲಿ ಕನ್ನಡ ಸಿನಿಮಾ ಈ ಮಟ್ಟಿನ ಸೌಂಡ್ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಚಿತ್ರಕ್ಕೆ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತಿತರರ ತಾರಾಗಣವಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ.
‘ಕೆಜಿಎಫ್ 2’ ಟ್ರೈಲರ್ ಸಿಕ್ಕಾಪಟ್ಟೆ ಪವರ್ಫುಲ್ ಆಗಿ ಮೂಡಿ ಬಂದಿದೆ. ಸಂಜಯ್ ದತ್ ಪಾತ್ರವಾದ ಅಧೀರ ಎಷ್ಟು ಭಯಾನಕ ಅನ್ನುವುದನ್ನು ಈ ಟ್ರೈಲರ್ನಲ್ಲಿ ತೋರಿಸಲಾಗಿದೆ. ರಾಕಿ ಭಾಯ್ ಎಂಟ್ರಿ ಕೂಡ ಸಖತ್ತಾಗಿದೆ ಮೂಡಿ ಬಂದಿದೆ. ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್.. ಎಂದು ಎಂಟ್ರಿ ಕೊಡುವ ಯಶ್ ಕೇವಲ ಗ್ಯಾಂಗ್ಸ್ಟರ್ ಅಲ್ಲದೆ ಉದ್ಯಮಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಟ್ರೈಲರ್ ನ್ನು ಶಿವರಾಜ್ ಕುಮಾರ್, ತೆಲುಗು ಟ್ರೈಲರ್ ನ್ನು ರಾಮ್ ಚರಣ್, ತಮಿಳನ್ನು ಸೂರ್ಯ, ಹಿಂದಿ ಟ್ರೈಲರ್ ನ್ನು ಫರ್ಹಾನ್ ಅಖ್ತರ್, ಮಲಯಾಳಂನ ಟ್ರೈಲರ್ ನ್ನು ಪೃಥ್ವಿರಾಜ್ ರಿಲೀಸ್ ಮಾಡಿದ್ದಾರೆ.
Be the first to comment