ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ಒಟಿಟಿಯಲ್ಲಿ 10 ಕೋಟಿ ನಿಮಿಷ ವೀಕ್ಷಣೆ ಮಾಡಿದ ದಾಖಲೆ ಬರೆದಿದೆ.
ಕನ್ನಡ ಚಿತ್ರಗಳು ಒಟಿಟಿಯಲ್ಲಿ ಹೆಚ್ಚು ಓಡುವುದಿಲ್ಲ ಎನ್ನುವ ಆಪಾದನೆಯ ನಡುವೆಯೇ ‘ಭಜರಂಗಿ 2′ ದಾಖಲೆ ನಿರ್ಮಿಸಿದೆ. ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ಮೂರು ದಿನ ಈ ಚಿತ್ರ 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಪಡೆದು ಕನ್ನಡ ಸಿನಿಮಾರಂಗದಲ್ಲಿ ಕಡಿಮೆ ಸಮಯದಲ್ಲಿ ಈ ದಾಖಲೆ ಮಾಡಿದ ಮೊದಲ ಸಿನಿಮಾ ಎನಿಸಿತು. ಈಗ 16ನೇ ದಿನಕ್ಕೆ 10 ಕೋಟಿ ನಿಮಿಷ ವೀಕ್ಷಣೆ ಪಡೆದ ದಾಖಲೆ ಪಡೆದಿದೆ. ಡಿಸೆಂಬರ್ 23ರಂದು ಈ ಸಿನಿಮಾ ಓಟಿಟಿಯಲ್ಲಿ ತೆರೆ ಕಂಡಿತ್ತು.
ಭಜರಂಗಿ 2 ಚಿತ್ರ ಬಿಡುಗಡೆ ಆದ ದಿನವೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಹೊಂದಿದರು. ಇದರಿಂದ ಚಿತ್ರ ಪ್ರದರ್ಶನ ಕೆಲದಿನಗಳ ಕಾಲ ನಿಂತಿತ್ತು. ಬಳಿಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆದರೂ, ಪ್ರೇಕ್ಷಕರು ನಿಧಾನವಾಗಿಯೇ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದ್ದರು.
ಈ ಚಿತ್ರದಲ್ಲಿ ಶಿವಣ್ಣ ಜೊತೆ ನಾಯಕಿಯಾಗಿ ಭಾವನಾ ಮೆನನ್ ಅವರು ನಟಿಸಿದ್ದಾರೆ. ಎ ಹರ್ಷ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಭಜರಂಗಿ 2’ ಚಿತ್ರಕ್ಕೆ ಒಟಿಟಿಯಲ್ಲಿ ಸಿಕ್ಕ ಪ್ರತಿಕ್ರಿಯೆ ಕನ್ನಡ ಚಿತ್ರ ನಿರ್ಮಾಪಕರಿಗೆ ಆಶಾವಾದ ಉಂಟು ಮಾಡಿದೆ. ಕೋವಿಡ್ ಮೂರನೇ ಅಲೆ ರಾಜ್ಯದಲ್ಲಿ ಹೆಚ್ಚಾದರೆ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳು ಒಟಿಟಿ ಮೊರೆ ಹೋಗುವ ಸಾಧ್ಯತೆಯಿದೆ. ಸಾಲು ಸಾಲು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲು ಎದುರು ನೋಡುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾಗಿವೆ.
ಕನ್ನಡದ ಮತ್ತೊಂದು ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಜನವರಿ 13ರಂದು ಜೀ 5ನಲ್ಲಿ ಪ್ರದರ್ಶನ ಕಾಣಲಿದೆ. ರಾಜ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಎನಿಸಿದೆ.
______






Be the first to comment