ಟಾಲಿವುಡ್ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’ ಚಿತ್ರ ಡಿಸೆಂಬರ್ ತಿಂಗಳಿನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ.
ಬೋಯಪಟಿ ಶ್ರೀನು ನಿರ್ದೇಶನದ ‘ಅಖಂಡ’ ಚಿತ್ರ ಆಂಧ್ರದಲ್ಲಿ 60 ಕೋಟಿ ರುಾ. ಗಳಿಸಿ ಡಿಸೆಂಬರ್ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನ್ನುವ ದಾಖಲೆ ಬರೆದಿದೆ. ಈ ಹಿಂದೆ 2016ರಲ್ಲಿ ತೆರೆಕಂಡಿದ್ದ ರಾಮ್ ಚರಣ್ ನಟನೆಯ ‘ಧ್ರುವ’ ಚಿತ್ರ ಬಾಕ್ಸಾಫೀಸ್ನಲ್ಲಿ 58 ಕೋಟಿ ರೂಪಾಯಿ ಬಾಚಿಕೊಂಡ ಸಾಧನೆ ಮಾಡಿತ್ತು.
ಅಖಂಡ ಚಿತ್ರ ಯಾವುದೇ ಹೆಚ್ಚುವರಿ ಪ್ರದರ್ಶನ ಅಥವಾ ವಿಶೇಷ ಪ್ರದರ್ಶನಗಳಿಲ್ಲದೇ ಕೇವಲ ಮಾಮೂಲಿ ಪ್ರದರ್ಶನಗಳಲ್ಲಿಯೇ ದಾಖಲೆ ಗಳಿಕೆ ಮಾಡಿದೆ ಎನ್ನುವುದು ವಿಶೇಷ. ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಆಂಧ್ರಪ್ರದೇಶದಲ್ಲಿ ಗಳಿಕೆ 60 ಕೋಟಿ ರೂಪಾಯಿ ದಾಟಿದ್ದರೆ, ಜಗತ್ತಿನ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗಿದೆ.
ಕೊರೊನಾ ಎರಡನೇ ಅಲೆಯ ನಂತರ ತೆರೆಕಂಡ ತೆಲುಗು ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನ್ನುವ ದಾಖಲೆ ‘ಅಖಂಡ’ ಪಾಲಾಗಿದೆ. ಇದು ಬಾಲಕೃಷ್ಣ ನಟನೆಯ ಮೊದಲ 100 ಕೋಟಿ ರೂಪಾಯಿ ಕಲೆಕ್ಷನ್ ಚಿತ್ರ.
‘ಅಖಂಡ’ದಲ್ಲಿ ಬಾಲಕೃಷ್ಣ ಅವರು ದ್ವಿಪಾತ್ರ ಮಾಡಿದ್ದು, ಒಂದು ಪಾತ್ರದಲ್ಲಿ ಅಘೋರನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದು, ಬಾಲಕೃಷ್ಣ ಅಭಿನಯವನ್ನು ಹೊಗಳಿದ್ದಾರೆ. ಬಾಲಕೃಷ್ಣ ಬಿಟ್ಟು ಯಾವ ನಟನೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎನ್ನುವ ಮಾತು ಕೇಳಿ ಬಂದಿದೆ.
‘ಅಖಂಡ’ದಲ್ಲಿ ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಸ್.ತಮನ್ ಸಂಗೀತ ನೀಡಿದ್ದಾರೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ಚಿತ್ರ ಡಿಸೆಂಬರ್ 17ರಂದು ತೆರೆಕಾಣಲಿದೆ. ಈ ಚಿತ್ರ ಅಖಂಡ ಚಿತ್ರದ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
___
Be the first to comment