ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರ ಬಿಡುಗಡೆ ಆದ ಮೊದಲ ದಿನವೇ 1 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುವ ಮೂಲಕ ಗಣೇಶ್ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ.
ಗಾಳಿಪಟ-2 ನೋಡಿದ ಜನರು ಗಣೇಶ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಮೊದಲು ಜನರನ್ನು ನಕ್ಕು ನಗಿಸಿ ಭಾವುಕರನ್ನಾಗಿ ಮಾಡಿರುವ ಗೋಲ್ಡನ್ ಸ್ಟಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 14 ವರ್ಷಗಳ ಹಿಂದೆ ಗಾಳಿಪಟ ಚಿತ್ತ 175 ದಿನ ಪ್ರದರ್ಶನ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಗಾಳಿಪಟ-2 ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ತೆರೆಕಂಡ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
ಚಿತ್ರ ರಾಜ್ಯದಲ್ಲಿ 700, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿದಂತೆ ಮೊದಲ ದಿನವೇ 1000ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಪ್ರೀಮಿಯರ್ ಶೋಗಳ ಕಲೆಕ್ಷನ್ ಸೇರಿ ಮೊದಲ ದಿನ ಅಂದಾಜು 15 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್ ರೆಡ್ಡಿ ಚಿತ್ರದ ನಿರ್ಮಾಪಕರು.
ನಟ ಗಣೇಶ್ ಚಿತ್ರತಂಡ ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದಿದ್ದಾರೆ. ಚಿತ್ರ ಬೆಂಗಳೂರು, ಮೈಸೂರು ಭಾಗದಲ್ಲಿ ಮೊದಲ ದಿನ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ.
____
Be the first to comment