ಮರುಬಿಡುಗಡೆಯಾಗಲಿದೆ ಕಲಿವೀರ ಚಿತ್ರ

ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪಲು ಸಾಧ್ಯವಾಗದ ಕಾರಣ ಕಲಿವೀರ ಸಿನಿಮಾವನ್ನು ನವೆಂಬರ್ ತಿಂಗಳಿನಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಲಾಕ್ ಡೌನ್ ಬಳಿಕ ತೆರೆಗೆ ಬಂದ ಮೊದಲ ಸಿನಿಮಾ ಇದಾಗಿದ್ದು ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷೆಯಂತೆ ಗಳಿಕೆ ಆಗಲಿಲ್ಲ ಎನ್ನುವುದು ಚಿತ್ರತಂಡಕ್ಕೆ ಬೇಸರವಾಗಿದೆ. ಆಗಸ್ಟ್ 6 ರಂದು ಕನ್ನಡ ಸಿನಿಮಾ ಕಲಿವೀರ ಬಿಡುಗಡೆಯಾಗಿತ್ತು.

ಚಿತ್ರಮಂದಿರದಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರ ‘ಕಲಿವೀರ’ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನವಂಬರ್ ತಿಂಗಳಲ್ಲಿ ಚಿತ್ರ ಮರುಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಿದವರು ಚೆನ್ನಾಗಿಲ್ಲ ಎನ್ನುತ್ತಿಲ್ಲ. ಆದರೆ ಹೆಚ್ಚು ಜನರಿಗೆ ಸಿನಿಮಾ ತಲುಪಲು ಸಾಧ್ಯವಾಗುತ್ತಿಲ್ಲ. ಚಿತ್ರ ಹೆಚ್ಚು ಜನಕ್ಕೆ ತಲುಪಬೇಕು. ನಿರ್ಮಾಪಕರು ಹೂಡಿದ ಬಂಡವಾಳ ಮತ್ತೆ ಬರಬೇಕು ಎನ್ನುವ ಉದ್ದೇಶದಿಂದ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ನಿರ್ಮಾಪಕ ಕೆಎಂಪಿ ಶ್ರೀನಿವಾಸ್‌ ತಿಳಿಸಿದ್ದಾರೆ.

ನಟ ಏಕಲವ್ಯ ಕಲರಿಯಪಟ್ಟು, ಯೋಗ ಮತ್ತು ಮಾರ್ಷಲ್ ಆರ್ಟ್ಸ್ ನಲ್ಲಿ ಚ್ಯಾಂಪಿಯನ್ ಆಗಿದ್ದಾರೆ. ಕಲಿವೀರ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದ್ದು ಇದು ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಕಥೆಯಾಗಿದೆ. ಚಿತ್ರದಲ್ಲಿ ನಾಯಕ ನಟನ ನಿಜವಾದ ಸ್ಟಂಟ್ ಹೈಟ್ಲೈಟ್ ಆಗಿದ್ದು, ಪ್ರೇಕ್ಷಕರು ನಾಯಕನ ಅಭಿನಯವನ್ನು ಇಷ್ಟಪಟ್ಟಿದ್ದಾರೆ.

ಚಿತ್ರವು ಮರುಬಿಡುಗಡೆಗೆಯಾದ ಬಳಿಕ ಮತ್ತಷ್ಟು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಎದುರು ನೋಡುತ್ತಿದೆ.
ಚಿತ್ರದಲ್ಲಿ ಪಾವನ ಗೌಡ ಮತ್ತು ಚಿರಶ್ರೀ ಅಂಚನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತಬಲಾ ನಾಣಿ, ಟಿಎಸ್ ನಾಗಾಭರಣ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಜ್ಯೋತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ವಿ ಮನೋಹರ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕಲಿವೀರ ಸಿನಿಮಾ ಕಮರ್ಷಿಯಲ್ ಆಗಿದ್ದು ಪ್ರೀತಿ, ಪ್ರಣಯ ಜೊತೆಗೆ ಸಸ್ಪೆನ್ಸ್, ಸೇಡು ತೀರಿಸಿಕೊಳ್ಳುವ ಅಂಶಗಳನ್ನು ಹೊಂದಿದೆ. ಇದು ಐತಿಹಾಸಿಕ ಮತ್ತು ವರ್ತಮಾನದ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!